ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve bank of india)

 

• ರಿಸರ್ವ್ ಬ್ಯಾಂಕ್ನ್ನು 1935ರ ಏಪ್ರಿಲ್ 1ರಂದು,ರಿಸರ್ವ್ ಬ್ಯಾಂಕ್ ಕಾಯ್ದೆ, 1934ರ ಅನ್ವಯ ಸ್ಥಾಪಿಸಲಾಯಿತು. 1949 ಜನವರಿ 1ರಂದು ಇದನ್ನು ರಾಷ್ಟ್ರೀಕರಣಗೊಳಿಸಿ ಭಾರತದ ಕೇಂದ್ರ ಬ್ಯಾಂಕ್ ಆಗಿ ಪರಿವರ್ತಿಸಲಾಯಿತು.
• ಕೇಂದ್ರ ಕಚೇರಿ ಮುಂಬೈಯಲ್ಲಿರುತ್ತದೆ.
• ಇದರ ಆಡಳಿತ ಹಾಗೂ ಮೇಲ್ವಿಚಾರಣೆ ಇಪ್ಪತ್ತು (20) ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯು ನೋಡಿಕೊಳ್ಳುತ್ತದೆ. ಇವರಲ್ಲಿ ಒಬ್ಬ ಗವರ್ನರ್, ನಾಲ್ಕು ಉಪ ಗವರ್ನರುಗಳು ಹದಿನಾಲ್ಕು ನಿರ್ದೇಶಕರುಗಳು ಹಾಗೂ ಹಣಕಾಸು ಇಲಾಖೆಯ ಒಬ್ಬ ಅಥವಾ ಇಬ್ಬರು ಅಧಿಕಾರಿಗಳು ನೋಡಿಕೊಳ್ಲುತ್ತಾರೆ.
• ಮುಂಬೈ, ದೆಹಲಿ, ಚೆನ್ನೈ ಹಾಗೂ ಕೊಲ್ಕತ್ತಾದಲ್ಲಿ ನಾಲ್ಕು ಸ್ಥಳೀಯ ಕಚೇರಿಗಳನ್ನು ಹೊಂದಿದೆ. ಇದಲ್ಲದೆ ಇತರ ಹತ್ತೊಂಬತ್ತು (19) ನಗರಗಳಲ್ಲಿ ಇದರ ಕಚೇರಿಗಳಿವೆ.
• ಭಾರತೀಯ ರಿಸರ್ವ ಬ್ಯಾಂಕನ್ನು ಭಾರತದ ಕೇಂದ್ರ ಬ್ಯಾಂಕ್ ಎಂದು ಕರೆಯುತ್ತೇವೆ.

ಪ್ರಮುಖ ಕಾರ್ಯಗಳು


1) ನೋಟು ಚಲಾವಣೆ : ಭಾರತೀಯ ರಿಸರ್ವ ಬ್ಯಾಂಕ್ ಕಾಯ್ದೆಯ ಪ್ರಕಾರ ನೋಟುಗಳನ್ನು ಮುದ್ರಿಸಿ ಹಾಗೂ ಚಲಾವಣೆಗೆ ತರುವ ಪರಮಾಧಿಕಾರ ರಿಸರ್ವ್ ಬ್ಯಾಂಕ್ಗೆ ಮಾತ್ರ ಇರುತ್ತದೆ. ನಾಣ್ಯಗಳು ಹಾಗೂ ಒಂದು ರೂಪಾಯಿ ನೋಟುಗಳನ್ನು ಹೊರತುಪಡಿಸಿ ಬೇರೆಲ್ಲ ನೋಟುಗಳನ್ನು ರಿಸರ್ವ್ ಬ್ಯಾಂಕ್ ಮುದ್ರಿಸಿ ಹಾಗೂ ಚಲಾವಣೆಗೆ ತರುತ್ತದೆ.
2) ಹಣಕಾಸು ನೀತಿ ನಿರೂಪಕ : ಭಾರತದ ಹಣಕಾಸು ನೀತಿಯನ್ನು ಸಿದ್ದಪಡಿಸಿ, ಜಾರಿಗೊಳಿಸಿ ಹಾಗೂ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಜವಾಬ್ದಾರಿ ರಿಸರ್ವ್ ಬ್ಯಾಂಕ್ಗಿದೆ.
3) ಮಾರುಕಟ್ಟೆ ನಿಯಂತ್ರಕ : ಇದು ಭಾರತದ ಹಣಕಾಸಿನ ಮಾರುಕಟ್ಟೆಯ ನಿಯಂತ್ರಕ ಹಾಗೂ ಮೇಲ್ವಿಚಾರಕ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮಾನದಂಡಗಳನ್ನು ನಿರ್ಧರಿಸುತ್ತದೆ.
4) ವಿದೇಶಿ ವಿನಿಮಯ : ಇದು ಭಾರತದ ವಿದೇಶಿ ವಿನಿಯಮ ಪಾಲಕ. ವಿದೇಶಿ ವಿನಿಮಯದ ನಿಯಂತ್ರಣೆ, ಪೂರೈಕೆ ಹಾಗೂ ಜಾರಿಗೆ ತಂದ ನಿರ್ಧಾರವನ್ನು ಪರೋಕ್ಷವಾಗಿ ನೋಡಿಕೊಳ್ಳುತ್ತದೆ.
5) ಬ್ಯಾಂಕುಗಳ ಬ್ಯಾಂಕ್ : ಭಾರತೀಯ ರಿಸರ್ವ ಬ್ಯಾಂಕ್ ಇತರ ಭಾರತದ ಬ್ಯಾಂಕುಗಳಿಗೆ ಬ್ಯಾಂಕ್ ಆಗಿ ಕಾರ್ಯನಿಹಿಸುತ್ತದೆ ಹಾಗೂ ಎಲ್ಲಾ ಬ್ಯಾಂಕ್ಗಳು ರಿಸರ್ವ್ ಬ್ಯಾಂಕ್ ನಿಯಂತ್ರಣ ಕ್ಕೊಳಪಟ್ಟಿದೆ. 1949ರ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆ ಪ್ರಕಾರ ಎಲ್ಲಾ ವಾಣಿಜ್ಯ ಬ್ಯಾಂಕ್ಗಳು ರಿಸರ್ವ ಬ್ಯಾಂಕ್ನೊಡನೆ ತಮ್ಮ ಠೇವಣಿಗಳ ಸ್ವಲ್ಪ ಹಣವನ್ನು ಕಾಯ್ದಿರಿಸಬೇಕಾಗುತ್ತದೆ.
6) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಣಕಾಸಿನ ನೀತಿಗಳ ಬಗ್ಗೆ ಸಲಹೆಗಳನ್ನು ನೀಡುತ್ತದೆ.
7) ಹೊಸ ಬ್ಯಾಂಕುಗಳನ್ನು ಸ್ಥಾಪಿಸಲು ಪರವಾನಗಿ ನೀಡುವ ಅಧಿಕಾರ ಭಾರತೀಯ ರಿಸರ್ವ ಬ್ಯಾಂಕ್ಗಿದೆ.
8) ರಿಸರ್ವ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಕಟ್ಟಕಡೆಯ ಸಾಲದಾತನಾಗಿ ಕಾರ್ಯನಿರ್ವಹಿಸುತ್ತದೆ. ವಾಣಿಜ್ಯ ಬ್ಯಾಂಕುಗಳು ನಷ್ಟ ಅನುಭವಿಸಿದಾಗ ಹಾಗೂ ಯಾವುದೇ ಹಣಕಾಸಿನ ತೊಂದರೆಯಲ್ಲಿ ಸಿಲುಕಿಕೊಂಡಾಗ ರಿಸರ್ವ್ ಬ್ಯಾಂಕ್ ಅವುಗಳಿಗೆ ಸಾಲವನ್ನು ನೀಡುತ್ತದೆ.
9) ರೂಪಾಯಿಯು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಆರ್ಬಿಐ ಸಹಾಯ ಮಾಡುತ್ತದೆ.
10) ಭಾರತೀಯ ವಾಣಿಜ್ಯ ಬ್ಯಾಂಕುಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ಹಾಗೂ ಅಗತ್ಯವಿದ್ದಲ್ಲಿ ಕೆಲ ಸಲಹೆಗಳನ್ನು ನೀಡುತ್ತದೆ.

ಭಾರತೀಯ ರಿಸರ್ವ ಬ್ಯಾಂಕ್‍ನ ಹಣಕಾಸು ನೀತಿ


ಭಾರತೀಯ ಕೇಂದ್ರ ಬ್ಯಾಂಕ್ ಆದ ರಿಸರ್ವ್ ಬ್ಯಾಂಕಿನ ಅತಿ ಮುಖ್ಯವಾದ ಕಾರ್ಯವೆಂದರೆ ಹಣಕಾಸು ನೀತಿಯನ್ನು ಸಿದ್ದಪಡಿಸುವುದು. ಇದರ ಮೂಲಕ ಅದು ಹಣದ ಸರಬರಾಜನ್ನು ಅಗತ್ಯಕ್ಕೆ ತಕ್ಕಂತೆ ರೂಪಿಸುತ್ತದೆ.

1. ಬ್ಯಾಂಕ್ ದರ (Bank Rate)


ರಿಸರ್ವ್ ಬ್ಯಾಂಕಿನ ಕಾರ್ಯಗಳಲ್ಲಿ ಹೇಳಿರುವ ಹಾಗೆ ಅದು ಬ್ಯಾಂಕುಗಳ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ಕೆಲವು ಸಂದರ್ಭಗಳಲ್ಲಿ ವಾಣಿಜ್ಯ ಬ್ಯಾಂಕುಗಳು ರಿಸರ್ವ್ಬ್ಯಾಂಕಿನಿಂದ ದೀರ್ಘಾವಧಿ ಸಾಲಗಳನ್ನು ತೆಗೆದುಕೊಳ್ಳುತ್ತದೆ. ಈ ಸಾಲದ ಮೇಲೆ ರಿಸರ್ವ್ ಬ್ಯಾಂಕ್ ವಿಧಿಸುವ ಬಡ್ಡಿಯನ್ನೇ ಬ್ಯಾಂಕ್ ದರ ಎಂದು ಕರೆಯುತ್ತೇವೆ. ಪ್ರಸ್ತುತ ಬ್ಯಾಂಕ್ ದರ ಶೇ. 6.25ರಷ್ಟಿದೆ.

2. ಕಾಯ್ದಿಟ್ಟ ಹಣ ಅಥವಾ ನಗದು ಮೀಸಲು ಅನುಪಾತ (Cash Reserve Ratio-CCR)


ವಾಣಿಜ್ಯ ಬ್ಯಾಂಕುಗಳ ತಮ್ಮ ಠೇವಣಿಗಳ ಕೆಲವಂಶವನ್ನು ರಿಸರ್ವ್ ಬ್ಯಾಂಕಿನಲ್ಲಿ ಹಣದ ಮೂಲಕ ಕಾಯ್ದಿರಿಸಬೇಕಾಗುತ್ತದೆ. ಇದನ್ನೇ ನಾವು ಕಾಯ್ದಿಟ್ಟ ಹಣ ಅಥವಾ ನಗದು ಮೀಸಲು ಅನುಪಾತ ಎಂದು ಕರೆಯುತ್ತೇವೆ. ಬ್ಯಾಂಕುಗಳಿಗೆ ಈ ಕಾಯ್ದಿಟ್ಟ ಹಣಕ್ಕೆ ಯಾವುದೇ ಬಡ್ಡಿ ಲಭಿಸುವುದಿಲ್ಲ. ಪ್ರಸ್ತುತ ನಗದು ಮೀಸಲು ಅನುಪಾತ ಶೇ.4ರಷ್ಟಿದೆ.

3. ಮುಕ್ತ ಮಾರುಕಟ್ಟೆ ನೀತಿ (Open Market Operations)


ಭಾರತೀಯ ರಿಸರ್ವ್ ಬ್ಯಾಂಕ್ ಮುಕ್ತ ಮಾರುಕಟ್ಟೆಯಲಿ ಸರ್ಕಾರಿ ಸಾಲಪತ್ರ ಅಥವಾ ಬಾಂಡ್ಗಳನ್ನು ಮಾರುವ ಮತ್ತು ಕೊಳ್ಳುವ ಕ್ರಿಯೆಯನ್ನು ಮುಕ್ತ ಮಾರುಕಟ್ಟೆ ನೀತಿ ಎನ್ನುತ್ತೇವೆ. ಬೇಡಿಕೆ ಪ್ರೇರಿತ ಹಣದುಬ್ಬರ ಸಂದರ್ಭದಲ್ಲಿ ಸಾಲ ಪತ್ರಗಳನ್ನು ಮಾಡಿದಾಗ ಮಾರುಕಟ್ಟೆಯಲ್ಲಿ ಹಣದ ಪೂರೈಕೆ ಕಡಿಮೆಯಾಗಿ ಹಣದುಬ್ಬರನ್ನು ನಿಯಂತ್ರಿಸಬಹುದು.

4. ರೆಪೋ ದರ (Repo Rate)


ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಅಲ್ಪಾವಧಿ ಸಾಲಗಳನ್ನು ನೀಡುತ್ತದೆ. ಈ ಅಲ್ಪವಾಧಿ ಸಾಲವನ್ನು ತೀರಿಸುವ ದಿನಾಂಕ ಹಾಗೂ ಅದರ ಮೇಲೆ ವಿಧಿಸುವ ಬಡ್ಡಿ ದರವು ಮುಂಚೆಯೇ ನಿಗದಿತವಾಗಿರುತ್ತದೆ. ಈ ಅಲ್ಪಾವಧಿ ಸಾಲಗಳಿಗೆ ರಿಸರ್ವ್ ಬ್ಯಾಂಕ್ ವಿಧಿಸುವ ಬಡ್ಡಿಯನ್ನು ರೆಪೋ ದರ ಎಂದು ಕರೆಯುತ್ತೇವೆ. ಪ್ರಸ್ತುತ ರೆಪೋ ದರ ಶೇ.6 ರಷ್ಟಿದೆ.

5. ರಿವರ್ಸ್ ರೆಪೋ ದರ (Reverse Repo rate)


ಭಾರತೀಯ ರಿಸರ್ವ್ ಬ್ಯಾಂಕ್ ಮಾರುಕಟ್ಟೆಯಿಂದ ಕೆಲವು ಸಂದರ್ಭದಲ್ಲಿ ಅಲ್ಪಾವಧಿ ಸಾಲಗಳನ್ನು ತೆಗೆದುಕೊಳ್ಳುತ್ತದೆ. ಮುಖ್ಯವಾಗಿ ಹಣದುಬ್ಬರವನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಈ ಕ್ರಮವನ್ನು ತೆಗೆದುಕೊಳ್ಳುತ್ತದೆ. ಈ ಅಲ್ಪಾವಧಿ ಸಾಲಕ್ಕೆ ರಿಸರ್ವ್ ಬ್ಯಾಂಕ್ ಕಟ್ಟುವ ಬಡ್ಡಿಯನ್ನೇ ರಿವರ್ಸ್ ರೆಪೋ ದರ ಎಂದು ಕರೆಯುತ್ತೇವೆ. ಪ್ರಸ್ತುತ ರೆಪೋ ದರ ಶೇ.5.75 ರಷ್ಟಿದೆ.

6. ಶಾಸನ ಬದ್ಧ ದ್ರವ್ಯತೆಯ ಅನುಪಾತ (Statutory Liquidity Ratio-SLR)


ಬ್ಯಾಂಕುಗಳು ಗ್ರಾಹಕರಿಂದ ಸಂಗ್ರಹಿಸುವ ವಿವಿಧ ಠೇವಣಿಗಳಲ್ಲಿ ಸ್ವಲ್ಪಂಶದ ಮೊತ್ತವನ್ನು ಬ್ಯಾಂಕುಗಳು ತಮ್ಮ ಬಳಿಯೇ ಚಿನ್ನ, ಸರ್ಕಾರದ ಬಾಂಡುಗಳು, ಸಾರ್ವಜನಿಕ ವಲಯದ ಬಾಂಡುಗಳು ಇತ್ಯಾದಿಗಳ ರೂಪದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಇದನ್ನೇ ನಾವು ಶಾಸನ ಬದ್ದ ದ್ರವ್ಯತೆಯ ಅನುಪಾತ ಎಂದು ಕರೆಯುತ್ತೇವೆ. ಇದು ಪ್ರಸ್ತು ರೆಪೋ ದರ ಶೇ.20ರಷ್ಟಿದೆ

ರಿಸರ್ವ್ ಬ್ಯಾಂಕಿನ ಹಣಕಾಸಿನ ನೀತಿಯ ಮಹತ್ವ


1. ಹಣದುಬ್ಬರ ನಿಯಂತ್ರಣ : ಇದು ಹಣಕಾಸಿನ ನೀತಿಯ ಬಹುಮುಖ್ಯ ಉದ್ದೇಶವಾಗಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಹಣಕಾಸಿನ ಪೂರೈಕೆಯಲ್ಲಿ ಹೆಚ್ಚಳವಾದಾಗ ವಸ್ತುಗಳ ಬೇಡಿಕೆಯಲ್ಲಿ ಏರಿಕೆ ಉಂಟಾಗಿ ಆ ವಸ್ತುಗಳ ಬೆಲೆಯಲ್ಲಿ ಸಹಜವಾಗಿ ಹೆಚ್ಚಳವಾಗುತ್ತದೆ. ಇಂತಹ ಸಂದರ್ಭದಲ್ಲಿ ವಸ್ತುಗಳ ಬೆಲೆಯಲ್ಲಿ ಏರುಪೇರಾಗಿ ಕೆಳಹಂತದ ಹಾಗೂ ಮಧ್ಯಮ ಹಂತದ ಜನರೇ ಹೆಚ್ಚಾಗಿರುವ ಭಾರತದಲ್ಲಿ ಜನರಿಗೆ ತೀವ್ರ ತೊಂದರೆ ಉಂಟಾಗುತ್ತದೆ. ಆದ್ದರಿಂದ ಬೆಲೆಗಳಲ್ಲಿ ಸ್ಥಿರತೆ ಕಾಪಾಡುವುದು ಹಾಗೂ ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ರಿಸರ್ವ್ ಬ್ಯಾಂಕಿನ ಅತಿ ಮುಖ್ಯ ಕಾರ್ಯವಾಗಿರುತ್ತದೆ.
2. ಆರ್ಥಿಕ ಅಭಿವೃದ್ದಿ : ಅಭಿವೃದ್ದಿ ಶೀಲ ರಾಷ್ಟ್ರಗಳಲ್ಲಿ ಹಣಕಾಸಿನ ನೀತಿಯ ಇನ್ನೊಂದು ಪ್ರಮುಖ ಉದ್ದೇಶವೆಂದರೆ ಆರ್ಥಿಕ ಅಭಿವೃದ್ದಿಯನ್ನು ಸಾಧಿಸುವುದು. ಸಾಲಗಳ ಬಡ್ಡಿದರವನ್ನು ನಿಯಂತ್ರಣದಲ್ಲಿಟ್ಟುಕೊಂಡು ಹಾಗೂ ಹಣದುಬ್ಬರವನ್ನು ನಿಯಂತ್ರಿಸಿ ಆರ್ಥಿಕ ಅಭಿವೃದ್ದಿಗೆ ಉತ್ತಮವಾದ ಪರಿಸರವನ್ನು ರೂಪಿಸುವುದರಿಂದ ಆರ್ಥಿಕ ಅಭಿವೃದ್ದಿಯನ್ನು ಸಾಧಿಸಬಹುದು.
3. ಉಳಿತಾಯವನ್ನು ಉತ್ತೇಜಿಸುವುದು.
4. ಕೈಗಾರಿಕೆಗಳ ಅಭಿವೃದ್ದಿಗೆ ಅಗತ್ಯವಿರುವ ಹಣಕಾಸಿನ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ನೋಡಿಕೊಳ್ಳುವುದು.
5. ಒಂದು ದೇಶದ ಆಂತರಿಕ ಹಾಗೂ ಬಾಹ್ಯ ಆರ್ಥಿಕ ಪರಿಸ್ತಿತಿಯಲ್ಲಿ ಸ್ಥಿರತೆಯನ್ನು ಸಾಧಿಸುವುದು.
6. ರೂಪಾಯಿ ಮೌಲ್ಯದಲ್ಲಿ ಸ್ಥಿರ ವಿನಿಮಯ ದರವನ್ನು ಕಾಪಾಡಿಕೊಳ್ಳುವುದು ಹಾಗೂ ವಿದೇಶಿ ವ್ಯಾಪಾರ ಚಟುವಟಿಕೆಗಳಲ್ಲಿ ಪ್ರೋತ್ಸಾಹ ನೀಡುವುದು.
7. ಭಾರತಕ್ಕೆ ವಿದೇಶಿ ಬಂಡವಾಳವನ್ನು ಹರಿದು ಬರುವಂತೆ ಮಾಡಲು ಹಣಕಾಸಿನ ನೀತಿಯು ಮುಖ್ಯ ಪಾತ್ರ ವಹಿಸುತ್ತದೆ.