ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗ (Karnataka : Natural vegetation)

 

• ಪ್ರಕೃತಿದತ್ತವಾಗಿ ಬೆಳೆಯುವ ವಿವಿಧ ಸಸ್ಯ ಸಮುದಾಯವನ್ನು ‘ಸ್ವಾಭಾವಿಕ ಸಸ್ಯವರ್ಗ’ ಎನ್ನುವರು.
• ಪರಿಸರ ಸಮತೋಲನ ಕಾಪಾಡುವುದರಲ್ಲಿ ಸಸ್ಯವರ್ಗವು ಪ್ರಮುಖ ಪಾತ್ರವಹಿಸುತ್ತದೆ.
• ಸಸ್ಯವರ್ಗವು ಮರಮುಟ್ಟು, ಕೈಗಾರಿಕೆಗಳಿಗೆ ಕಚ್ಚಾ ವಸ್ತು, ಗಿಡಮೂಲಿಕೆಗಳು, ಜೇನು, ಬಿದಿರು, ಬೆತ್ತ ಮುಂತಾದುವುಗಳನ್ನು ಒದಗಿಸುತ್ತದೆ.
• ಕರ್ನಾಟಕದ ಕಾಡುಗಳಲ್ಲಿ ವಿಶೇಷವಾಗಿ ಶ್ರೀಗಂಧದ ಮರಗಳು ಬೆಳೆಯುತ್ತವೆ. ಇದರಿಂದ ಸುಗಂಧ ದ್ರವ್ಯ, ಕುಸುರಿ ಕೆಲಸದ ಕುಶಲ ವಸ್ತುಗಳು, ಸಾಬೂನು, ಔಷಧಿಗಳನ್ನು ತಯಾರಿಸಲಾಗುವುದು.
• ಇವು ವಿಶ್ವವಿಖ್ಯಾತವಾಗಿದ್ದು, ದೇಶೀಯ ಅಪಾರವಾದ ಬೇಡಿಕೆ ಪೂರೈಸುವುದಲ್ಲದೆ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಆದ್ದರಿಂದ ಕರ್ನಾಟಕವು ‘ಶ್ರೀಗಂಧದ ನಾಡು’ ಎಂದೇ ಪ್ರಸಿದ್ಧಿ ಪಡೆದಿದೆ.

ಸಸ್ಯವರ್ಗದ ವಿಧಗಳು


• ಮಳೆಯ ಪ್ರಮಾಣ, ಭೂಸ್ವರೂಪ ಹಾಗೂ ಮಣ್ಣಿನ ಲಕ್ಷಣಗಳನ್ನಾಧರಿಸಿ ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗವನ್ನು ವಿಂಗಡಿಸಲಾಗಿದೆ. ಅವುಗಳೆಂದರೆ ;
1) ನಿತ್ಯ ಹರಿದ್ವರ್ಣದ ಕಾಡುಗಳು
2) ಎಲೆ ಉದುರಿಸುವ ಕಾಡುಗಳು
3) ಮಿಶ್ರ ಬಗೆಯ ಕಾಡು
4) ಕುರುಚಲು ಮತ್ತು ಹುಲ್ಲುಗಾವಲು.

1. ನಿತ್ಯಹರಿದ್ವರ್ಣದ ಕಾಡುಗಳು


• ಪ್ರಮುಖವಾಗಿ 250 ಸೆಂ.ಮೀ.ಗಳಿಗೂ ಅಧಿಕ ವಾರ್ಷಿಕ ಮಳೆ ಬೀಳುವ ಭಾಗಗಳಲ್ಲಿ ಈ ಕಾಡುಗಳು ಬೆಳೆಯುತ್ತವೆ.
• ಅಧಿಕ ಮಳೆ ಮತ್ತು ಅಧಿಕ ಉಷ್ನಾಂಶಗಳಿಂದ ಇಲ್ಲಿ ಮರಗಳು ಎತ್ತರವಾಗಿ ಹಾಗೂ ದಟ್ಟವಾಗಿ ಬೆಳೆಯುತ್ತವೆ.
• ಈ ಕಾಡುಗಳು ದುರ್ಗಮವಾಗಿದ್ದು, ಕೆಲವು ಕಡೆ ಸೂರ್ಯನ ಕಿರಣಗಳು ನೆಲಕ್ಕೆ ತಲುಪುವುದಿಲ್ಲ.
• ಇಲ್ಲಿ ಪ್ರಮುಖವಾಗಿ ಬೀಟೆ, ತೇಗ, ಮತ್ತಿ, ನಂದಿ, ದೂಪ, ಹೊನ್ನೆ, ಹೆಬ್ಬಲಸು ಮುಂತಾದ ಎತ್ತರದ ಮರಗಳು ಬೆಳೆಯುತ್ತವೆ.
• ಅನೇಕ ರೀತಿಯ ಸಾಂಬಾರ ಪದಾರ್ಥಗಳು, ಲವಂಗ, ಏಲಕ್ಕಿ, ದಾಲ್ಚಿನ್ನಿ, ಔಷಧಿ ಸಸ್ಯಗಳು ಹೇರಳವಾಗಿ ಬೆಳೆಯುತ್ತವೆ.
• ನಿತ್ಯಹರಿದ್ವರ್ಣದ ಕಾಡುಗಳು ಕಾಡುಗಳು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಂಡುಬರುತ್ತವೆ.

2. ಎಲೆ ಉದುರಿಸುವ ಕಾಡುಗಳು


• ಚಳಿಗಾಲದ ತರುವಾಯ ತೇವಾಂಶದ ಕೊರತೆಯಿಂದಾಗಿ ಮರಗಳ ಎಲೆಗಳು ಉದುರುತ್ತವೆ. ಮತ್ತೆ ವಸಂತ ಋತುವಿನಲ್ಲಿ ಚಿಗುರುತ್ತವೆ. ಇವುಗಳನ್ನು ‘ಎಲೆ ಉದುರಿಸುವ ಕಾಡುಗಳು’ ಎನ್ನುವರು.
• ವಾರ್ಷಿಕ 60-120 ಸೆಂ.ಮೀ. ಮಳೆ ಬೀಳುವ ಭಾಗಗಳಲ್ಲಿ ಇಂತಹ ಸಸ್ಯವರ್ಗವಿದೆ. ಇಂತಹ ಕಾಡುಗಳು
• ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳ ಪೂರ್ವಭಾಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದ ದಕ್ಷಿಣ ಭಾಗಗಳು, ಮಂಡ್ಯ, ರಾಮನಗರ ಮತ್ತು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಗಳಲ್ಲಿ ಕಂಡು ಬರುತ್ತವೆ.
• ತೇಗ, ಹೊನ್ನೆ, ಮತ್ತಿ, ಬೇವು, ಮಾವು, ಹಲಸು, ಮುತ್ತುಗ, ಬಾಗೆ, ಆಲ, ಶ್ರೀಗಂಧ ಮತ್ತು ಬಿದಿರು ಇಲ್ಲಿ ಬೆಳೆಯುವ ಪ್ರಮುಖ ಮರಗಳು.

3. ಮಿಶ್ರ ಬಗೆಯ ಕಾಡುಗಳು


• ನಿತ್ಯಹರಿದ್ವರ್ಣ ಮತ್ತು ಅಗಲ ಎಲೆಗಳನ್ನುಳ್ಳ ಎಲೆ ಉದುರಿಸುವ ಪ್ರಕಾರದ ಮರಗಳು ಬೆಳೆಯುವ ಸಸ್ಯವರ್ಗವೇಮಿಶ್ರ ಬಗೆಯ ಕಾಡುಗಳು.
• ವಾರ್ಷಿಕ 120-150 ಸೆಂ.ಮೀ. ಮಳೆ ಬೀಳುವ ಭಾಗಗಳಲ್ಲಿ ಇಂತಹ ಸಸ್ಯವರ್ಗ ಕಂಡುಬರುತ್ತದೆ.
• ಇಂತಹ ಕಾಡುಗಳು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಕೆಲವು ಭಾಗಗಳು, ಕೊಡಗಿನ ಪೂರ್ವಭಾಗ ಹಾಗೂ ಚಿಕ್ಕಮಗಳೂರು, ಹಾಸನ ಮತ್ತು ಮೈಸೂರು ಜಿಲ್ಲೆಯ ಭಾಗಗಳಲ್ಲಿ ಕಂಡು ಬರುತ್ತವೆ.
• ತೇಗ, ಹೊನ್ನೆ, ಮತ್ತಿ, ನಂದಿ, ದಿಂಡಗ, ಶ್ರೀಗಂಧ, ಹಲಸು ಮತ್ತು ಬಿದಿರು ಇಲ್ಲಿ ಬೆಳೆಯುವ ಪ್ರಮುಖ ಮರಗಳು.

4. ಹುಲ್ಲುಗಾವಲು ಮತ್ತು ಕುರುಚಲು ಸಸ್ಯಗಳು


• ಕರ್ನಾಟಕದಲ್ಲಿ 60 ಸೆಂ.ಮೀ.ಗಿಂತ ಕಡಿಮೆ ವಾರ್ಷಿಕ ಮಳೆ ಬೀಳುವ ಪ್ರದೇಶಗಳಲ್ಲಿ ಇಂತಹ ಸಸ್ಯವರ್ಗ ಹಂಚಿಕೆಯಾಗಿದೆ.
• ಮಳೆಯ ಕೊರತೆ ಮತ್ತು ಒಣಹವೆಯಿಂದಾಗಿ ಕುರುಚಲು ಗಿಡ ಮತ್ತು ಮುಳ್ಳಿನ ಗಿಡಗಳು ಬೆಳೆಯುತ್ತವೆ. ಉದಾ: ಕಳ್ಳಿ, ಕತ್ತಾಳಿ, ಕರಿಜಾಲಿ, ಬೇಲ, ಈಚಲು, ಹಂಚಿ ಮತ್ತು ಕುಂತಿ ಹುಲ್ಲು ಇತ್ಯಾದಿ.
• ಇಂತಹ ಸಸ್ಯವರ್ಗವು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಳ್ಳಾರಿ, ಚಿತ್ರದುರ್ಗ ಇತ್ಯಾದಿ ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ.
• ಸುಮಾರು 1400 ಮೀ. ಗಿಂತ ಹೆಚ್ಚು ಎತ್ತರವುಳ್ಳ ಭಾಗದಲ್ಲಿ ತಂಪಾದ ವಾಯುಗುಣವಿರುವ ಕುದುರೆಮುಖ, ಬಾಬಾಬುಡನ್ಗಿರಿ, ಬಿಳಿಗಿರಿರಂಗನಬೆಟ್ಟ, ಕೊಡಗಿನ ಬ್ರಹ್ಮಗಿರಿ ಸರಣಿಗಳ ಇಳಿಜಾರುಗಳು ಹುಲ್ಲುಗಾವಲಿನಿಂದ ಕೂಡಿವೆ. ಇವುಗಳ ತಗ್ಗಾದ ಕಣಿವೆಗಳುಝರಿ, ತೊರೆಗಳಿಂದ ಕೂಡಿದ ಭಾಗಗಳಲ್ಲಿ ವಿಶಿಷ್ಟವಾದ ‘ಶೋಲಾ ಕಾಡುಗಳು’ ಬೆಳೆಯುತ್ತವೆ.

ಅರಣ್ಯಗಳ ಹಂಚಿಕೆ


• ಎಲ್ಲಾ ವಿಧದ ಅರಣ್ಯಗಳು ಒಳಗೊಂಡಂತೆ, ಕರ್ನಾಟಕದಲ್ಲಿ ದಾಖಲಾದ ಅರಣ್ಯ ಪ್ರದೇಶ 43.4 ಲಕ್ಷ ಚ.ಕಿ.ಮೀ.ಗಳು. ಇದು ರಾಜ್ಯದ ಭೌಗೋಳಿಕ ಪ್ರದೇಶದಲ್ಲಿ ಶೇ.22.6 ಭಾಗದಷ್ಟಾಯಿತು.
• ಭಾರತದಲ್ಲಿ ಸಮೃದ್ಧ ಅರಣ್ಯಗಳನ್ನುಳ್ಳ ರಾಜ್ಯಗಳಲ್ಲಿ ಕರ್ನಾಟಕವು ಏಳನೆಯ ಸ್ಥಾನದಲ್ಲಿದೆ.
• ಉತ್ತರ ಕನ್ನಡ ಹೆಚ್ಚು ಅರಣ್ಯ ಪ್ರದೇಶವನ್ನೊಳಗೊಂಡ ಜಿಲ್ಲೆ. ತರುವಾಯ ಶಿವಮೊಗ್ಗ ಮತ್ತು ಚಾಮರಾಜನಗರ ಜಿಲ್ಲೆಗಳು ಕ್ರಮವಾಗಿ ಎರಡು ಮತ್ತು ಮೂರನೆಯ ಸ್ಥಾನಗಳಲ್ಲಿವೆ.
• ವಿಜಯಪುರ ಅತಿ ಕಡಿಮೆ ಅರಣ್ಯವುಳ್ಳ ಜಿಲ್ಲೆಯಾಗಿದೆ.