ಕರ್ನಾಟಕದ ನದಿಗಳು (Karnataka : Rivers)

 

ಜಲ ಸಂಪನ್ಮೂಲಗಳಲ್ಲಿ ನದಿಗಳಿಗೆ ಮಹತ್ವದ ಸ್ಥಾನವಿದೆ. ಕರ್ನಾಟಕದ ನದಿ ಜಾಲಗಳನ್ನು ಮುಖ್ಯವಾಗಿ ಪೂರ್ವಾಭಿಮುಖವಾಗಿ ಹರಿಯುವ ನದಿಗಳು ಮತ್ತು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಎಂದು ಎರಡು ವಿಧಗಳಾಗಿ ವಿಂಗಡಿಸಬಹುದು.

1. ಪೂರ್ವಾಭಿಮುಖವಾಗಿ ಹರಿಯುವ ನದಿಗಳು


ಕೃಷ್ಣಾ, ಕಾವೇರಿ, ಪೆನ್ನಾರ್ ಮತ್ತು ಪಾಲಾರ್ ನದಿಗಳು ಪೂರ್ವಾಭಿಮುಖವಾಗಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುವ ಪ್ರಮುಖ ನದಿಗಳು.

ಕೃಷ್ಣಾ ನದಿ


• ಕೃಷ್ಣಾ ನದಿ ದಕ್ಷಿಣ ಭಾರತದ ಎರಡನೇ ಮುಖ್ಯ ನದಿ. ಇದು ಮಹಾಬಲೇಶ್ವರ ಎಂಬಲ್ಲಿ ಉಗಮ ಹೊಂದಿ 1392 ಕಿ.ಮೀ. ದೂರ ಪೂರ್ವದೆಡೆಗೆ ಹರಿದು ಬಂಗಾಳ ಕೊಲ್ಲಿ ಸೇರುತ್ತದೆ.
• ಇದು ಕರ್ನಾಟಕದಲ್ಲಿ 480 ಕಿ.ಮೀ. ದೂರ ಹರಿಯುವುದು.
• ಭೀಮ, ತುಂಗಭದ್ರ, ಘಟಪ್ರಭ ಮತ್ತು ಮಲಪ್ರಭ ಇದರ ಉಪನದಿಗಳಾಗಿವೆ.
• ಕೃಷ್ಣಾ ನದಿ ಉತ್ತರ ಕರ್ನಾಟಕದ ನೀರಾವರಿ ಮತ್ತು ಜಲವಿದ್ಯುತ್ ತಯಾರಿಕೆಗೆ ಅನುಕೂಲವಾಗಿದೆ.

ಕಾವೇರಿ ನದಿ


• ಕಾವೇರಿಯು ಕರ್ನಾಟಕದ ಅತಿ ಪ್ರಮುಖ ನದಿ. ದಕ್ಷಿಣ ಗಂಗೆ ಎಂದೇ ಪ್ರಸಿದ್ಧಿ.
• ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಉಗಮ ಹೊಂದಿ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಪೂರ್ವಾಭಿಮುಖವಾಗಿ 804 ಕಿ.ಮೀ. ದೂರ ಹರಿದು ಬಂಗಾಳ ಕೊಲ್ಲಿಗೆ ಸೇರುವುದು.
• ಕರ್ನಾಟಕದಲ್ಲಿ 380 ಕಿ.ಮೀ. ದೂರ ಹರಿಯುತ್ತದೆ.
• ಈ ನದಿಗೆ ಹಲವು ಉಪನದಿಗಳು ಸೇರುತ್ತವೆ. ಉದಾ: ಹೇಮಾವತಿ, ಹಾರಂಗಿ, ಲೋಕಪಾವನಿ, ಅರ್ಕಾವತಿ, ಶಿಂಷಾ, ಲಕ್ಷ್ಮಣತೀರ್ಥ, ಕಪಿಲೆ ಮತ್ತು ಸುವರ್ಣಾವತಿ.
• ಕೃಷಿ, ಜಲವಿದ್ಯುತ್ ತಯಾರಿಕೆ, ಕುಡಿಯುವ ನೀರು ಪೂರೈಕೆಗಳಿಗೆ ಈ ನದಿಗಳು ಬಹು ಉಪಯುಕ್ತವಾಗಿದೆ.

ಪೆನ್ನಾರ್ ಮತ್ತು ಪಾಲಾರ್ ನದಿಗಳು


• ಕೋಲಾರ, ತುಮಕೂರು ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಹರಿದು ಅನಂತರ ಆಂಧ್ರಪ್ರದೇಶ ಮತ್ತು ತಮಿಳುನಾಡು ಪ್ರವೇಶಿಸುವುವು.
• ಉತ್ತರ ಪೆನ್ನಾರ್ ಮತ್ತು ದಕ್ಷಿಣ ಪೆನ್ನಾರ್ ಎಂಬ ಎರಡು ಪ್ರತ್ಯೇಕ ನದಿಗಳಿವೆ.

2. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು


• ಅನೇಕ ನದಿಗಳು ಮಲೆನಾಡಿನಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತವೆ. ಉದಾ: ಶರಾವತಿ, ಕಾಳಿ, ಗಂಗಾವಳಿ (ಬೆಡ್ತಿ), ನೇತ್ರಾವತಿ, ವಾರಾಹಿ, ಅಘನಾಶಿನಿ ಇತ್ಯಾದಿ.
• ಪೆನ್ನಾರ್ ನದಿಗೆ ಮತ್ತೊಂದು ಹೆಸರು ಪಿನಾಕಿನಿ.
• ಇವು ಕಡಿದಾದ ಇಳಿಜಾರಿನಲ್ಲಿ ಹರಿಯುತ್ತಾ ಜಲಪಾತಗಳನ್ನು ಸೃಷ್ಟಿಸುತ್ತವೆ. ಜಲವಿದ್ಯುತ್ ತಯಾರಿಕೆಗೆ ನೆರವಾಗುತ್ತವೆ.
• ಶರಾವತಿ ನದಿ ನಿರ್ಮಿತ ಜೋಗ್ ಜಲಪಾತ ಜಗತ್ಪ್ರಸಿದ್ಧವಾದುದು.
• ಇದು ಭಾರತದ ಎತ್ತರದ ಜಲಪಾತವಾಗಿದೆ (253 ಮೀ.).
• ರಾಜ್ಯದ ಇತರೆ ಪ್ರಮುಖ ಜಲಪಾತಗಳೆಂದರೆ ಗೋಕಾಕ್ (ಘಟಪ್ರಭ), ಬಂಡಾಜೆ (ನೇತ್ರಾವತಿ), ಉಂಚಳ್ಳಿ (ಅಘನಾಶಿನಿ), ಛಾಯ ಭಗವತಿ (ದೋಣಿ ನದಿ), ಚುಂಚನಕಟ್ಟೆ, ಶಿಂಷಾ, ಗಗನಚುಕ್ಕಿ, ಭರಚುಕ್ಕಿ (ಕಾವೇರಿ), ಮಾಗೋಡು ಜಲಪಾತ (ಬೆಡ್ತಿ) ಇತ್ಯಾದಿ.