ಸಮಾಸ ಪ್ರಕರಣ

 

ಸಮಾಸಗಳು (samaasagalu)


ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು.
ಉದಾ:
ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು
ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ

ವಿಗ್ರಹ ವಾಕ್ಯ


ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು.
ಉದಾ:
ಸಮಸ್ತಪದ = ಪೂರ್ವಪದ + ಉತ್ತರ ಪದ
ದೇವಮಂದಿರ= ದೇವರ + ಮಂದಿರ
ಹೆಜ್ಜೇನು=ಹಿರಿದು + ಜೇನು
ಮುಂಗಾಲು= ಕಾಲಿನ + ಮುಂದು

(ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದು, ಎರಡನೆಯ ಪದವನ್ನು ಉತ್ತರ ಪದವೆಂದು ಕರೆಯಲಾಗುತ್ತದೆ.)

ಸಮಾಸ ಪದಗಳಾಗುವ ಸನ್ನಿವೇಶಗಳು


1> ಸಂಸ್ಕೃತ-ಸಂಸ್ಕೃತ ಶಬ್ಧಗಳು ಸೇರಿ
2> ಕನ್ನಡ-ಕನ್ನಡ ಶಬ್ಧಗಳು ಸೇರಿ
3> ತದ್ಬವ-ತದ್ಬವ ಶಬ್ಧಗಳು ಸೇರಿ
4> ಅಚ್ಚಗನ್ನಡ ಶಬ್ಧ – ತದ್ಬವ ಶಬ್ಧಗಳು ಸೇರಿ ಸಮಾಸಪದಗಳಾಗುತ್ತವೆ.
ಆದರೆ ಕನ್ನಡಕ್ಕೆ – ಸಂಸ್ಕೃತ ಶಬ್ಧಗಳು ಸೇರಿ ಸಮಾಸವಾಗಲಾರದು.

ಸಮಾಸದ ವಿಧಗಳು


1> ತತ್ಪುರುಷ ಸಮಾಸ
2> ಕರ್ಮಧಾರೆಯ ಸಮಾಸ
3> ದ್ವಿಗು ಸಮಾಸ
4> ಅಂಶಿ ಸಮಾಸ
5> ದ್ವಂದ್ವ ಸಮಾಸ
6> ಬಹುವ್ರೀಹಿ ಸಮಾಸ
7> ಕ್ರಿಯಾ ಸಮಾಸ
8> ಗಮಕ ಸಮಾಸ

1> ತತ್ಪುರುಷ ಸಮಾಸ


ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.
ಉದಾ:
ಮರದ+ಕಾಲು =ಮರಗಾಲು
ಬೆಟ್ಟದ+ತಾವರೆ =ಬೆಟ್ಟದಾವರೆ
ಕೈಯ+ತಪ್ಪು = ಕೈತಪ್ಪು
ಹಗಲಿನಲ್ಲಿ+ಕನಸು =ಹಗಲುಗನಸು
ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು

2> ಕರ್ಮಧಾರೆಯ ಸಮಾಸ


ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ.
ಉದಾ:
ಹೊಸದು+ಕನ್ನಡ =ಹೊಸಗನ್ನಡ
ಹಿರಿದು+ಜೇನು =ಹೆಜ್ಜೇನು
ಕಿರಿಯ+ಗೆಜ್ಜೆ =ಕಿರುಗೆಜ್ಜೆ
ಕೆಂದುಟಿ, ಚಿಕ್ಕಮಗು, ಸಿಡಿಮದ್ದು , ಪಂದತಿ

3> ದ್ವಿಗು ಸಮಾಸ


ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ.
ಉದಾ:
ಒಂದು + ಕಣ್ಣು = ಒಕ್ಕಣ್ಣು
ಎರಡು+ಬಗೆ=ಇಬ್ಬಗೆ
ಸಪ್ತ+ಸ್ವರ=ಸಪ್ತಸ್ವರ
ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು

4> ಅಂಶಿ ಸಮಾಸ


ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು. ಅಂಶವೆಂದರೆ ‘ಭಾಗ’ ಅಥವಾ ‘ಅವಯವ’
ಉದಾ:
ತಲೆಯ+ಮುಂದು=ಮುಂದಲೆ
ಬೆರಳಿನ+ತುದಿ = ತುದಿಬೆರಳು
ಕರೆಯ+ಒಳಗು= ಒಳಗೆರೆ
ಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ

5> ದ್ವಂದ್ವ ಸಮಾಸ


ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.
ಉದಾ:
ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು
ಕಾಫಿಯೂ+ತಿಂಡಿಯೂ=ಕಾಫಿ-ತಿಂಡಿ
ಬೆಟ್ಟವೂ+ಗುಡ್ಡವೂ=ಬೆಟ್ಟಗುಡ್ಡಗಳು
ಅಣ್ಣನು +ತಮ್ಮನು= ಅಣ್ಣತಮ್ಮಂದಿರು
ತನುಮನಗಳು, ಕೈಕಾಲು, ಮಳೆಬೆಳೆ, ನಡೆನುಡಿ

6> ಬಹುವ್ರೀಹಿ ಸಮಾಸ


ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು.
ಉದಾ:
ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ
ಶಾಂತಿಯ + ಖನಿಯಾಗಿರುವನು + ಯಾವನೋ=ಶಾಂತಿಖನಿ
ಸಹಸ್ರ +ಅಕ್ಷಿಗಳು + ಯಾರಿಗೋ =ಸಹಸ್ರಾಕ್ಷ
ಪಂಕದಲ್ಲಿ + ಜನಿಸಿದ್ದು+ಯಾವುದೊ=ಪಂಕಜ
ಚಂದ್ರನಖಿ, ಕುರುಕುಲಾರ್ಕ, ಚಕ್ರಪಾಣಿ, ನಿಶಾಚಾರಿ

7> ಕ್ರಿಯಾ ಸಮಾಸ


ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ.
ಉದಾ:
ಸುಳ್ಳನ್ನು +ಆಡು=ಸುಳ್ಳಾಡು
ಕಣ್ಣನ್ನು +ತೆರೆ=ಕಣ್ದೆರೆ
ವಿಷವನ್ನು +ಕಾರು =ವಿಷಕಾರು
ಕೈಯನ್ನು +ಮುಗಿ=ಕೈಮುಗಿ
ಆಸೆಹೊತ್ತು, ಹಣ್ಣುತಿನ್ನು , ಕಂಗೆಡು , ಜೀವಬಿಡು

8> ಗಮಕ ಸಮಾಸ


ಪೂರ್ವ ಪದವು ಸರ್ವನಾಮ, ಕೃದಂತ ಗುಣವಾಚಕ ಸಂಖ್ಯೆಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಕ್ಕೆ ಗಮಕ ಸಮಾಸ ಎಂದು ಹೆಸರು.
ಉದಾ:
ಸರ್ವನಾಮಕ್ಕೆ
ಅವನು +ಹುಡುಗ=ಆ ಹುಡುಗ
ಇವಳು + ಹುಡುಗಿ = ಈ ಹುಡುಗಿ
ಯಾವುದು+ ಮರ=ಯಾವಮರ
ಕೃಂದತಕ್ಕೆ
ಮಾಡಿದುದು+ಅಡುಗೆ =ಮಾಡಿದಡುಗೆ
ತೂಗುವುದು +ತೊಟ್ಟಿಲು =ತೂಗುವ ತೊಟ್ಟಿಲು
ಉಡುವುದು+ದಾರ=ಉಡುದಾರ
ಸುಡುಗಾಡು, ಬೆಂದಡಿಗೆ, ಕಡೆಗೋಲು
ಗುಣವಾಚಕಕ್ಕೆ
ಹಸಿಯದು +ಕಾಯಿ=ಹಸಿಯಕಾಯಿ
ಹಳೆಯದು +ಕನ್ನಡ=ಹಳೆಗನ್ನಡ
ಕಿರಿಮಗಳು, ಬಿಳಿಯಬಟ್ಟೆ , ಅರಳುಮೊಗ್ಗು
ಸಂಖ್ಯೆಗೆ
ನೂರು +ಹತ್ತು =ನೂರಹತ್ತು
ಮೂವತ್ತು+ಆರು=ಮೂವತ್ತಾರು
ಮೂವತ್ತು, ಹೆಪ್ಪತ್ತು, ಇಪ್ಪತೈದು .