ಕರ್ನಾಟಕದ ಖನಿಜ ಸಂಪನ್ಮೂಲಗಳು (Karnataka : Mineral Resources)

 

• ಒಂದು ದೇಶ, ರಾಜ್ಯ ಅಥವಾ ಪ್ರದೇಶವು ಆರ್ಥಿಕವಾಗಿ ಮುಂದುವರಿಯಲು ಅಲ್ಲಿ ಸಿಗುವ ಅಪಾರವಾದ ಖನಿಜ ಸಂಪನ್ಮೂಲಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.
• ಕರ್ನಾಟಕ ರಾಜ್ಯವು ವಿವಿಧ ರೀತಿಯ ಖನಿಜ ಸಂಪತ್ತನ್ನು ಹೊಂದಿದೆ. ಅವುಗಳಲ್ಲಿ ಕಬ್ಬಿಣದ ಅದಿರು, ಚಿನ್ನ, ಮ್ಯಾಂಗನೀಸ್, ಸುಣ್ಣಕಲ್ಲು, ತಾಮ್ರ, ಬಾಕ್ಸೈಟ್, ಕ್ರೋಮೈಟ್, ಕಲ್ನಾರು, ಅಬ್ರಕ ಮತ್ತು ಗ್ರಾನೈಟ್ ಪ್ರಮುಖವಾದವು.

ಕಬ್ಬಿಣದ ಅದಿರು


• ಇದು ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಕಚ್ಚಾ ವಸ್ತು.
• ಕರ್ನಾಟಕವು ಉತ್ತಮ ದರ್ಜೆಯ ಮ್ಯಾಗ್ನಟೈಟ್ ಮತ್ತು ಹೆಮಾಟೈಟ್ ವರ್ಗದ ಅಪಾರವಾದ ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿದೆ.
• ಭಾರತದ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಕರ್ನಾಟಕವು ಎರಡನೆಯ ಸ್ಥಾನದಲ್ಲಿದೆ.
• ರಾಜ್ಯದಲ್ಲಿ 75 ಕಬ್ಬಿಣದ ಅದಿರಿನ ಗಣಿಗಳಿವೆ. ನಮ್ಮ ರಾಜ್ಯ ಉತ್ಪಾದಿಸುವ ಕಬ್ಬಿಣದ ಅದಿರಿನಲ್ಲಿ ಶ್ರೇಷ್ಠ ದರ್ಜೆಯ ಮ್ಯಾಗ್ನಟೈಟ್ನ ಪಾಲು ಶೇ.63 ಭಾಗದಷ್ಟಿದೆ. ಉಳಿದದ್ದು ಹೆಮಾಟೈಟ್ ದರ್ಜೆಯದಾಗಿದೆ.
• ಕರ್ನಾಟಕದ ಕಬ್ಬಿಣದ ಅದಿರಿನ ಹಂಚಿಕೆ ಅಧಿಕವಾಗಿ ಬಳ್ಳಾರಿ, ಚಿಕ್ಕಮಗಳೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಗದಗ ಜಿಲ್ಲೆಗಳಲ್ಲಿ ಕಂಡುಬರುತ್ತದೆ.
• ಬಳ್ಳಾರಿ ಜಿಲ್ಲೆಯು ಅಪಾರವಾದ ನಿಕ್ಷೇಪವನ್ನು ಹೊಂದಿದ್ದು, ಪ್ರಥಮ ಸ್ಥಾನದಲ್ಲಿದೆ. ಅದು ಹೊಸಪೇಟೆ ಮತ್ತು ಸಂಡೂರು ಪ್ರದೇಶಗಳಲ್ಲಿ ಕಂಡುಬರುತ್ತದೆ.
• ದೋಣಿಮಲೈ, ವಿಭೂತಿಗುಡ್ಡ, ಬೆಳಗಾಳ, ಕುಮಾರಸ್ವಾಮಿ ಬೆಟ್ಟಗಳು, ತಿಮ್ಮಪ್ಪನ ಗುಡಿ, ದೇವಾದ್ರಿ ಶ್ರೇಣಿ, ರಾಮದುರ್ಗ ಬೆಟ್ಟಗಳಲ್ಲಿ ಕಬ್ಬಿಣದ ಅದಿರನ್ನು ಉತ್ಪಾದಿಸಲಾಗುತ್ತಿದೆ.
• ಚಿಕ್ಕಮಗಳೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಬಾಬಾಬುಡನ್ಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ, ಗಂಗಾಮೂಲ, ಕಲ್ಹತ್ತಗಿರಿ, ಜೇನುಸುರಿ ಗುಡ್ಡಗಳಲ್ಲಿ ಕಬ್ಬಿಣದ ಅದಿರು ದೊರೆಯುತ್ತದೆ. ಜೀವವೈವಿಧ್ಯತೆಯನ್ನು
• ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಸಾಸಲು, ಬಾಗಲಕೋಟೆಯ ಅಮೀನಗಡ, ತುಮಕೂರು ಜಿಲ್ಲೆಯ ಹುಳಿಯಾರು, ಚಿಕ್ಕನಾಯಕನಹಳ್ಳಿ, ಶಿವಮೊಗ್ಗ ಜಿಲ್ಲೆಯ ಕುಂಸಿ, ಶಂಕರಗುಡ್ಡ, ಸಿದ್ದರಹಳ್ಳಿ ಮುಂತಾದ ಕಡೆಗಳಲ್ಲಿಯೂ ಕಬ್ಬಿಣದ ಅದಿರಿನ ನಿಕ್ಷೇಪಗಳಿವೆ.
• ರಾಜ್ಯದಲ್ಲಿ ಉತ್ಪಾದನೆಯಾಗುವ ಕಬ್ಬಿಣದ ಅದಿರನ್ನು ಭದ್ರಾವತಿ ಮತ್ತು ಬಳ್ಳಾರಿ ಸಮೀಪದ ಜಿಂದಾಲ್ ವಿಜಯನಗರ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳಿಗೆ ಉಪಯೋಗಿಸಿ, ಉಳಿದ ಭಾಗವನ್ನು ರಫ್ತು ಮಾಡಲಾಗುತ್ತದೆ.

ಮ್ಯಾಂಗನೀಸ್


• ಮ್ಯಾಂಗನೀಸ್ ಅದಿರು ಮುಖ್ಯವಾಗಿ ಪದರು ಶಿಲೆ ಮತ್ತು ರೂಪಾಂತರ ಶಿಲೆಗಳಲ್ಲಿ ಆಕ್ಸೈಡ್ ರೂಪದಲ್ಲಿ ದೊರೆಯುತ್ತದೆ.
• ಇದನ್ನು ಮಿಶ್ರ ಲೋಹವಾಗಿ ಉಕ್ಕಿನ ತಯಾರಿಕೆಯಲ್ಲಿ ಬಳಸುವರು. ಜೊತೆಗೆ ರಾಸಾಯನಿಕ, ವಿದ್ಯುತ್ ಕೈಗಾರಿಕೆ, ರಾಸಾಯನಿಕ ಗೊಬ್ಬರ, ಕ್ಯಾಲಿಕೋ ಪ್ರಿಂಟಿಂಗ್ ಹಾಗೂ ಬಣ್ಣಗಳ ತಯಾರಿಕೆಯಲ್ಲಿಯೂ ಬಳಸುವರು.
• ಕರ್ನಾಟಕದಲ್ಲಿ ಮ್ಯಾಂಗನೀಸ್ ಅದಿರಿನ ನಿಕ್ಷೇಪ ಹೇರಳವಾಗಿದ್ದು, ದೇಶದ ಒಟ್ಟು ನಿಕ್ಷೇಪದಲ್ಲಿ ಶೇ.27 ಭಾಗದಷ್ಟಿದೆ.
• ಮ್ಯಾಂಗನೀಸ್ ಉತ್ಪಾದನೆಯಲ್ಲಿ ಒಡಿಶಾದ ನಂತರ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.
• ರಾಜ್ಯದ ಮ್ಯಾಂಗನೀಸ್ ಹಂಚಿಕೆಯು ಕಬ್ಬಿಣದ ಅದಿರಿನ ಪ್ರದೇಶಗಳಲ್ಲೇ ಕಂಡುಬರುತ್ತದೆ. ಬಳ್ಳಾರಿ ಜಿಲ್ಲೆಯ ಸಂಡೂರು ಪ್ರಮುಖ ಮ್ಯಾಂಗನೀಸ್ ಉತ್ಪಾದಿಸುವ ಪ್ರದೇಶವಾಗಿದೆ. ಇಲ್ಲಿ ರಾಜ್ಯದ ಶೇ. 90 ರಷ್ಟು ಮ್ಯಾಂಗನೀಸ್ ಉತ್ಪಾದಿಸಲಾಗುತ್ತಿದೆ.
• ಇತರೆ ಪ್ರಮುಖ ಮ್ಯಾಂಗನೀಸ್ ಗಣಿ ಕೇಂದ್ರಗಳೆಂದರೆ ಶಿವಮೊಗ್ಗ ಜಿಲ್ಲೆಯ ಕುಂಸಿ, ಶಂಕರಗುಡ್ಡ, ಹೊಸಹಳ್ಳಿ, ಚಿತ್ರದುರ್ಗ ಜಿಲ್ಲೆಯ ಸಾದರಹಳ್ಳಿ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕು, ಸೂಪ, ಲೋಂಡ, ಉಸ್ಕಾಂಡ ಹಾಗೂ ಧಾರವಾಡ, ವಿಜಯಪುರ, ಚಿಕ್ಕಮಗಳೂರು ಜಿಲ್ಲೆಗಳು.
• ರಾಜ್ಯದ ಮ್ಯಾಂಗನೀಸ್ ಉತ್ಪಾದನೆಯ ಬಹುಪಾಲು ಮ್ಯಾಂಗನೀಸ್ ಜಪಾನ್, ಚೀನಾ ಮುಂತಾದ ರಾಷ್ಟ್ರಗಳಿಗೆ ರಫ್ತಾಗುವುದು.

ಬಾಕ್ಸೈಟ್


• ಬಾಕ್ಸೈಟ್ ಅದಿರನ್ನು ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸಲು ಅಧಿಕವಾಗಿ ಬಳಸುತ್ತಾರೆ.
• ಸಿಮೆಂಟ್, ಉಕ್ಕು, ವಿದ್ಯುತ್ ತಂತಿಗಳ ತಯಾರಿಕೆಯಲ್ಲೂ ಬಳಸುತ್ತಿರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.
• ಕರ್ನಾಟಕದಲ್ಲಿ ಬಾಕ್ಸೈಟ್ ಅದಿರಿನ ನಿಕ್ಷೇಪವು ಬೆಳಗಾವಿ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ.
• ಬೆಳಗಾವಿ ಜಿಲ್ಲೆಯು ಪ್ರಮುಖ ಬಾಕ್ಸೈಟ್ ಉತ್ಪಾದಿಸುವ ಜಿಲ್ಲೆಯಾಗಿದೆ. ಇಲ್ಲಿನ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿ ಬಾಕ್ಸೈಟ್ ಗಣಿಗಳಿವೆ.
• ಈ ಅದಿರನ್ನು ಬೆಳಗಾವಿಯ ಇಂಡಿಯನ್ ಅಲ್ಯೂಮಿನಿಯಂ ಕಂಪನಿಯ ಕೈಗಾರಿಕೆಯಲ್ಲಿ ಬಳಸಲಾಗುತ್ತಿದೆ.

ಚಿನ್ನ


• ಚಿನ್ನವು ಅಪರೂಪದ, ಹೊಳೆಯುವ, ಹೆಚ್ಚು ಬಾಳಿಕೆ ಬರುವ ಹಳದಿ ಲೋಹವಾಗಿದೆ.
• ಇದನ್ನು ಆಭರಣಗಳ ತಯಾರಿಕೆ, ಗಡಿಯಾರ ಮುಂತಾದ ಅಮೂಲ್ಯ ವಸ್ತುಗಳ ತಯಾರಿಕೆಯಲ್ಲಿ ಅಧಿಕವಾಗಿ ಬಳಸುತ್ತಾರೆ.
• ಕರ್ನಾಟಕವು ಚಿನ್ನದ ಗಣಿಗಾರಿಕೆಯಲ್ಲಿ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಉತ್ಪಾದನೆಯ ಹೆಚ್ಚು ಚಿನ್ನವನ್ನು ಕರ್ನಾಟಕದ ಗಣಿಗಳಿಂದಲೇ ಪಡೆಯಲಾಗುತ್ತಿದೆ. ಆದ್ದರಿಂದ ಇದನ್ನು ‘ಚಿನ್ನದ ನಾಡು’ ಎಂದು ಕರೆಯುವರು.
• ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಚಿನ್ನ ಗಣಿಗಾರಿಕೆ ಕಂಡು ಬಂದಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಚಿನ್ನದ ಗಣಿಗಾರಿಕೆ 1880 ರಲ್ಲಿ ಜಾನ್ ಟೇಲರ್ ಎಂಬುವನು ಪ್ರಾರಂಭ ಮಾಡಿ, 1885 ರಲ್ಲಿ ಕೆ.ಜಿ.ಎಫ್. ಅಸ್ತಿತ್ವಕ್ಕೆ ಬರಲು ಕಾರಣವಾಯಿತು.
• ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿ ನಾಲ್ಕು ಪ್ರಮುಖ ಗಣಿಗಳಿವೆ. ಅವುಗಳೆಂದರೆ ನಂದಿದುರ್ಗ, ಉರಿಗಾಂ, ಚಾಂಪಿಯನ್ ರೀಫ್ ಮತ್ತು ಮೈಸೂರು ಗಣಿ.
• ಚಾಂಪಿಯನ್ ರೀಫ್ ಗಣಿಯು ಅತ್ಯಂತ ಆಳವಾದ ಚಿನ್ನದ ಗಣಿಯಾಗಿದೆ (3217 ಮೀ.).
• ಈ ಗಣಿಗಳಲ್ಲಿ ಹಲವು ವರ್ಷಗಳ ನಿರಂತರ ಗಣಿಗಾರಿಕೆಯಿಂದ ಚಿನ್ನದ ನಿಕ್ಷೇಪದ ಪ್ರಮಾಣ ಕಡಿಮೆಯಾಗಿದೆ. ಈಗ ಗಣಿಗಾರಿಕೆ ಸ್ಥಗಿತಗೊಂಡಿದೆ.
• ಪ್ರಸ್ತುತ ರಾಯಚೂರು ಜಿಲ್ಲೆಯ ಹಟ್ಟಿ ಭಾರತದ ಅತಿ ದೊಡ್ಡ ಚಿನ್ನದ ಗಣಿಯಾಗಿದೆ. ಇಲ್ಲಿ ಹೆಚ್ಚು ಚಿನ್ನವನ್ನು ಉತ್ಪಾದಿಸಲಾಗುತ್ತಿದೆ. ತುಮಕೂರು ಜಿಲ್ಲೆಯ ಬೆಳ್ಳಾರ, ಶಿರಾ ಸಮೀಪವಿರುವ ಅಜ್ಜನಹಳ್ಳಿಯಲ್ಲೂ ಚಿನ್ನದ ಅದಿರನ್ನು ಉತ್ಪಾದಿಸಲಾಗುತ್ತಿದೆ.
• ಇತರೆ ಚಿನ್ನದ ನಿಕ್ಷೇಪವಿರುವ ಸ್ಥಳಗಳೆಂದರೆ ಗದಗ ಜಿಲ್ಲೆಯ ಮುಳಗುಂದ, ಕಪ್ಪತ್ತಗುಡ್ಡ, ಹಾಸನ ಜಿಲ್ಲೆಯ ಕೆಂಪಿನಕೋಟೆ ಮೊದಲಾದವುಗಳು.