ಕರ್ನಾಟಕದ ಮಣ್ಣುಗಳು (Karnataka : Soils)

 

• ಭೂಮಿಯ ಮೇಲಿನ ತೆಳುವಾದ ಪದರವೇ ಮಣ್ಣು.
• ಕರ್ನಾಟಕದಲ್ಲಿ ವಿವಿಧ ಪ್ರಕಾರದ ಮಣ್ಣುಗಳಿವೆ. ಅವುಗಳನ್ನು ನಾಲ್ಕು ವಿಧಗಳನ್ನಾಗಿ ವಿಂಗಡಿಸಲಾಗಿದೆ.
1) ಕೆಂಪು ಮಣ್ಣು
2) ಕಪ್ಪು ಮಣ್ಣು
3) ಜಂಬಿಟ್ಟಿಗೆ ಮಣ್ಣು
4) ಕರಾವಳಿಯ ಮೆಕ್ಕಲು ಮಣ್ಣು.

1. ಕೆಂಪು ಮಣ್ಣು


• ಇದು ಗ್ರಾನೈಟ್, ನೀಸ್ ಶಿಲಾದ್ರವ್ಯಗಳಿಂದ ರೂಪುಗೊಂಡಿದ್ದು, ಕಬ್ಬಿಣದ ಆಕ್ಸೈಡ್ ಇರುವುದರಿಂದ ಈ ಮಣ್ಣು ಕೆಂಪಾಗಿರುತ್ತದೆ.
• ಈ ಮಣ್ಣಿನಲ್ಲಿ ಹೆಚ್ಚು ಸುಣ್ಣ ಮತ್ತು ಉಪ್ಪಿನಾಂಶವಿದ್ದು, ಸಾವಯವ ಅಂಶ ಕಡಿಮೆ. ತೇವಾಂಶ ಉಳಿಸಿಕೊಳ್ಳುವ ಸಾಮಥ್ರ್ಯ ಕಡಿಮೆ.
• ಈ ಮಣ್ಣಿನಲ್ಲಿ ತೃಣಧಾನ್ಯಗಳಾದ ರಾಗಿ, ನವಣೆ, ಸಜ್ಜೆ, ಜೋಳ, ಹಾರಕ ಇತ್ಯಾದಿ, ತಂಬಾಕು, ದ್ವಿದಳ ಧಾನ್ಯಗಳು, ನೆಲಗಡಲೆಗಳಂತಹ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯಬಹುದು.
• ನೀರಾವರಿ ಸೌಲಭ್ಯವಿರುವ ಕಡೆ ಭತ್ತ, ಕಬ್ಬು, ಆಲೂಗೆಡ್ಡೆ, ತರಕಾರಿಗಳು, ಬಾಳೆ, ತೆಂಗು, ಅಡಕೆ ಇತ್ಯಾದಿ ಬೆಳೆಯಲು ಯೋಗ್ಯವಾಗಿದೆ.
• ತುಮಕೂರು,ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಈ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ.

2. ಕಪ್ಪು ಮಣ್ಣು


• ಇದು ಬಸಾಲ್ಟ್ ಶಿಲೆಯ ಶಿಥಿಲೀಕರಣದಿಂದಾಗಿದ್ದು, ಇದರಲ್ಲಿ ಹೆಚ್ಚು ಮೆಗ್ನೀಷಿಯಂ, ಅಲ್ಯೂಮಿನಿಯಂ ಮತ್ತು ಕಬ್ಬಿಣದ ಆಕ್ಸೈಡ್ಗಳಿರುತ್ತವೆ. ಹೀಗಾಗಿ ಇದರ ಬಣ್ಣ ಕಪ್ಪು. ಇದನ್ನು ‘ಎರೆಮಣ್ಣು’ಅಥವಾ ‘ಕಪ್ಪು ಹತ್ತಿ ಮಣ್ಣು’ ಎಂದೂ ಕರೆಯುವರು.
• ಇದಕ್ಕೆ ಹೆಚ್ಚು ದಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ.
• ಈ ಮಣ್ಣಿನಲ್ಲಿ ಹತ್ತಿ, ಜೋಳ, ಸೂರ್ಯಕಾಂತಿ, ಮೆಣಸಿನಕಾಯಿ, ಮೆಕ್ಕೆಜೋಳ, ಬೇಳೆಕಾಳು, ಕಬ್ಬು, ಈರುಳ್ಳಿ ಮತ್ತು ಭತ್ತವನ್ನು ಬೆಳೆಯಲಾಗುತ್ತದೆ. ಈ ಮಣ್ಣು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಧಾರವಾಡ, ಗದಗ, ಬಳ್ಳಾರಿ, ಕೊಪ್ಪಳ, ಕಲಬುರಗಿ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕಪ್ಪು ಮಣ್ಣಿನ ಹಂಚಿಕೆಯಿದೆ.

3. ಜಂಬಿಟ್ಟಿಗೆ ಮಣ್ಣು


• ಅಧಿಕ ಉಷ್ಣ್ನಾಂಶ ಮತ್ತು ಅಧಿಕ ಮಳೆ ಬೀಳುವ ಭಾಗಗಳಲ್ಲಿ ಈ ವಿಧದ ಮಣ್ಣು ಕಂಡುಬರುತ್ತದೆ.
• ನೀರಿನಲ್ಲಿ ಕರಗುವ ಸುಣ್ಣ ಮತ್ತು ಸಿಲಿಕೇಟ್ಗಳು ಮಳೆ ನೀರಿನಲ್ಲಿ ಕರಗಿ ತಳದ ಮಣ್ಣಿನ ಸ್ತರಗಳಿಗೆ ಸಾಗಿಸಲ್ಪಡುತ್ತವೆ. ಕರಗದಂತಹ ಕಬ್ಬಿಣ ಮತ್ತು ಅಲ್ಯೂಮಿನಿಯಂಗಳು ಮೇಲ್ಪದರದಲ್ಲಿ ಉಳಿಯುತ್ತವೆ.
• ಇದು ಮಳೆಗಾಲದಲ್ಲಿ ಮೃದುವಾಗಿ, ಬೇಸಿಗೆಯಲ್ಲಿ ಒಣಗಿ ಗಟ್ಟಿಯಾಗಿ ಲ್ಯಾಟರೈಟ್ ಶಿಲೆಯಾಗುತ್ತದೆ. ಅದನ್ನು ಕಟ್ಟಡಗಳ ನಿರ್ಮಾಣಕ್ಕೆ ಉಪಯೋಗಿಸಲಾಗುವುದು.
• ಈ ಮಣ್ಣಿನಲ್ಲಿ ಗೋಡಂಬಿ, ಕಾಫಿ, ಚಹ, ಏಲಕ್ಕಿ, ಮೆಣಸು, ರಬ್ಬರ್, ತೆಂಗು ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಮುಂತಾದ ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಹಂಚಿಕೆಯಾಗಿದೆ.

4. ಕರಾವಳಿಯ ಮೆಕ್ಕಲು ಮಣ್ಣು


• ನದಿ, ಸಮುದ್ರದ ಅಲೆಗಳಿಂದ ಸಾಗಿಸಲ್ಪಟ್ಟ ಮಣ್ಣು ಸಮುದ್ರ ತೀರದಲ್ಲಿ ಸಂಗ್ರಹವಾಗಿ ನಿರ್ಮಾಣವಾಗಿದೆ.
• ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಣ್ಣು ಕಂಡುಬರುತ್ತದೆ.
• ಇದರಲ್ಲಿ ಮರಳು ಮತ್ತು ಜೇಡಿ ಮಿಶ್ರಣವಾಗಿರುವುದರ ಜೊತೆಗೆ ಕೊಳೆತ ಜೈವಿಕಾಂಶಗಳು ಸಮೃದ್ಧವಾಗಿರುತ್ತವೆ. ಭತ್ತ, ಗೋಡಂಬಿ, ತೆಂಗು, ಅಡಕೆ, ಬಾಳೆ ಮುಂತಾದ ಬೆಳೆಗಳ ಸಾಗುವಳಿಗೆ ಇದು ಸೂಕ್ತ.

ಮಣ್ಣಿನ ಸವೆತ :


ಭೂ ಮೇಲ್ಮೈಯಲ್ಲಿ ಕಂಡು ಬರುವ ಸಡಿಲವಾದ ಪದರವು ವಿವಿಧ ಪ್ರಾಕೃತಿಕ ಶಕ್ತಿಗಳಿಂದ
ಸ್ಥಳಾಂತರ ಹೊಂದುವ ಕ್ರಿಯೆಯನ್ನೇ “ಮಣ್ಣಿನ ಸವೆತ” ಅಥವಾ “ಭೂ ಸವೆತ” ಎನ್ನುತ್ತಾರೆ.

ಮುಖ್ಯ ಕಾರಣಗಳು


1)ಅರಣ್ಯಗಳ ನಾಶ,
2) ಸಾಕು ಪ್ರಾಣಿಗಳನ್ನು ಮೇಯಿಸುವುದು,
3) ಅವೈಜ್ಞಾನಿಕ ಬೇಸಾಯ,
4) ಅಧಿಕ ನೀರಾವರಿ ಬಳಕೆ

ಮಣ್ಣಿನ ಸವೆತದ ಪರಿಣಾಮಗಳು


1) ಮಣ್ಣಿನ ಸವೆತದಿಂದ ನದಿಗಳಲ್ಲಿ ಹೂಳುತುಂಬಿ ಪ್ರವಾಹ ಉಂಟಾಗುತ್ತದೆ.
2) ನದಿಯ ಪಾತ್ರದಲ್ಲಿ
ಹೂಳು ತುಂಬುವುದರಿಂದ ನದಿಗಳು ತಮ್ಮ ಪಾತ್ರವನ್ನು ಬದಲಾಯಿಸುತ್ತವೆ.
3) ಜಲಾಶಯ ಮತ್ತು ಕೆರೆಗಳಲ್ಲಿ ಹೂಳು ತುಂಬುವುದರಿಂದ ನೀರನ್ನು ಸಂಗ್ರಹಿಸುವ ಅವುಗಳ ಸಾಮಥ್ರ್ಯವು ಕಡಿಮೆಯಾಗುವುದು
4) ಭೂಸವೆತದಿಂದ ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಕಡಿಮೆಯಾಗುವುದು. ಇದರಿಂದ
ಸ್ವಾಭಾವಿಕ ಚಿಲುಮೆಗಳು ಬತ್ತಿ ಹೋಗುತ್ತವೆ. ಭಾರತವು ವ್ಯವಸಾಯ ಪ್ರಧಾನವಾದ ರಾಷ್ಟ್ರ ಇದರಿಂದ
ಭೂಸವೆತವು ವ್ಯವಸಾಯದ ಉತ್ಪಾದನೆಯ ಮೇಲೆ ಹೆಚ್ಚು ಪರಿಣಾಮವನ್ನು ಬೀರುವುದು. ಆದುದರಿಂದ
ಫಲವತ್ತತೆ ಹಾಗೂ ಉತ್ಪಾದನೆಯನ್ನು ಕಾಪಾಡಲು ಮಣ್ಣಿನ ಸವೆತವನ್ನು ತಡೆಗಟ್ಟುವುದು ಅಗತ್ಯವಾಗಿದೆ.

ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆ


ಮಣ್ಣಿನ ಸವೆತವನ್ನು
ತಡೆಗಟ್ಟುವ ಹಲವಾರು ವಿಧಾನಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ,
1) ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
2) ಅಡ್ಡ ಬದುಗಳನ್ನು ನಿರ್ಮಿಸುವುದು.
3) ಹಂತ ಹಂತವಾಗಿ ವ್ಯವಸಾಯ ಕ್ಷೇತ್ರಗಳ ನಿರ್ಮಾಣ.
4) ಅರಣ್ಯ ನಾಶವನ್ನು ತಡೆಗಟ್ಟುವುದು ಮತ್ತು ಅರಣ್ಯಗಳ ಬೆಳವಣಿಗೆಯನ್ನು ಪೆÇ್ರೀತ್ಸಾಹಿಸುವುದು.
5) ಪ್ರಾಣಿಗಳನ್ನು ಮೇಯಿಸುವುದನ್ನು ನಿಯಂತ್ರಿಸುವುದು.
6) ನೀರಿನ ಯೋಜಿತ ಬಳಕೆ.
7) ಚೆಕ್ ಡ್ಯಾಮ್‍ಗಳ ನಿರ್ಮಾಣ ಇತ್ಯಾದಿ