ಕರ್ನಾಟಕದ ಸಾರಿಗೆ ವ್ಯವಸ್ಥೆ(Karnataka : Transaport System)

 

• ಸ್ಥಳದಿಂದ ಸ್ಥಳಕ್ಕೆ ಸರಕುಗಳು ಹಾಗೂ ಪ್ರಯಾಣಿಕರನ್ನು ಸಾಗಿಸುವ ಮಾಧ್ಯಮವೇ ಸಾರಿಗೆ.
• ಕೃಷಿ, ಕೈಗಾರಿಕೆ ಮತ್ತು ವ್ಯಾಪಾರದ ಪ್ರಗತಿಯಲ್ಲಿ ಸಾರಿಗೆ ಸಂಪರ್ಕಗಳು ಜೀವನಾಡಿಯಿದ್ದಂತೆ.
• ಕರ್ನಾಟಕವು ಅನೇಕ ನೈಸರ್ಗಿಕ ಸಂಪನ್ಮೂಲಗಳಿಂದ ಕೂಡಿದ ರಾಜ್ಯ. ಇಲ್ಲಿ ಖನಿಜ ವಸ್ತುಗಳು, ವಾಣಿಜ್ಯ ಬೆಳೆಗಳು, ಅರಣ್ಯ ವಸ್ತುಗಳು, ಶಕ್ತಿ ಸಾಧನಗಳು ದೊರೆಯುವುವು.
• ಇವುಗಳ ಸಮರ್ಥ ಬಳಕೆಯಿಂದ ಆರ್ಥಿಕಾಭಿವೃದ್ಧಿಯನ್ನು ಸಾಧಿಸಲು ಸುವ್ಯವಸ್ಥಿತವಾದ ಸಾರಿಗೆ ಸೌಲಭ್ಯವು ಅಗತ್ಯ.
• ಕರ್ನಾಟಕವು ರಸ್ತೆ, ರೈಲು, ಜಲಸಾರಿಗೆ ಮತ್ತು ವಾಯುಸಾರಿಗೆ ವ್ಯವಸ್ಥೆಗಳನ್ನು ಹೊಂದಿದೆ.

ರಸ್ತೆ ಸಾರಿಗೆ


• ಕರ್ನಾಟಕದ ಜನರು ಹೆಚ್ಚಾಗಿ ಹಳ್ಳಿಗಾಡಿನಲ್ಲೇ ವಾಸ ಮಾಡುವುದರಿಂದ ಪ್ರತಿಯೊಂದು ಹಳ್ಳಿ- ಪಟ್ಟಣ ಹಾಗೂ ಇತರ ಜನವಸತಿಗಳನ್ನು ಸಂಪರ್ಕಿಸುವುದರಲ್ಲಿ ರಸ್ತೆ ಸಾರಿಗೆಯ ಪಾತ್ರ ಮಹತ್ವವುಳ್ಳದ್ದಾಗಿದೆ.
• ರಸ್ತೆಗಳ ಅಭಿವೃದ್ಧಿಯು ರಾಜ್ಯದ ಕೃಷಿ, ಕೈಗಾರಿಕೆ, ಗಣಿಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಪ್ರಗತಿಯನ್ನು ನಿರ್ಧರಿಸುತ್ತದೆ.
• ರಸ್ತೆ ಸಾರಿಗೆಯ ಬೆಳವಣಿಗೆ : ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ರಸ್ತೆ ಸಾರಿಗೆಯು ರೂಢಿಯಲ್ಲಿದೆ.
• ಹಳೆ ಮೈಸೂರು ಪ್ರಾಂತ್ಯದಲ್ಲಿ ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿದ್ದವು.
• ಪ್ರಸ್ತುತ ಒಟ್ಟು ರಸ್ತೆಗಳ ಉದ್ದ 2,53,601 ಕಿ.ಮೀ.ಗಳು.
• ಇವುಗಳಲ್ಲಿ ಶೇ.35.70 ಭಾಗದಷ್ಟು ಪಕ್ಕಾ ರಸ್ತೆಗಳು ಮತ್ತು ಶೇ. 64.30 ಭಾಗದಷ್ಟು ಕಚ್ಚಾ ರಸ್ತೆಗಳಾಗಿರುತ್ತವೆ.
• ಇತ್ತೀಚೆಗೆ ರಸ್ತೆಗಳ ಗುಣಮಟ್ಟದಲ್ಲಿಯೂ ಪ್ರಗತಿಯಾಗಿರುವುದು ಕಂಡುಬರುತ್ತದೆ.

ರಸ್ತೆಗಳ ವಿಧಗಳು :


ಕರ್ನಾಟಕದ ರಸ್ತೆಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ :
(1) ರಾಷ್ಟ್ರೀಯ ಹೆದ್ದಾರಿಗಳು
(2) ರಾಜ್ಯ ಹೆದ್ದಾರಿಗಳು
(3) ಜಿಲ್ಲಾ ರಸ್ತೆಗಳು ಹಾಗೂ
(4) ಗ್ರಾಮೀಣ ರಸ್ತೆಗಳು.

1) ರಾಷ್ಟ್ರೀಯ ಹೆದ್ದಾರಿಗಳು :


• ಪ್ರಮುಖ ನಗರಗಳು, ರಾಜ್ಯಗಳ ರಾಜಧಾನಿಗಳು ಹಾಗೂ ಬಂದರುಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ‘ರಾಷ್ಟ್ರೀಯ ಹೆದ್ದಾರಿ’ಗಳೆನ್ನುವರು.
• ಇವು ಗುಣಮಟ್ಟದ ಮತ್ತು ಅಗಲವಾದ ರಸ್ತೆಗಳಾಗಿದ್ದು, ದ್ವಿಮುಖ, ನಾಲ್ಕು ಪಥ ಮತ್ತು ಆರು ಪಥಗಳ ರಸ್ತೆಗಳನ್ನು ಹೊಂದಿರುತ್ತವೆ. ಇವು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಇವುಗಳ ನಿರ್ವಹಣೆ ಕಾರ್ಯವು ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ’ಕ್ಕೆ ಸೇರಿದೆ.
• ಕರ್ನಾಟಕದಲ್ಲಿ ಪ್ರಸ್ತುತ 14 ರಾಷ್ಟ್ರೀಯ ಹೆದ್ದಾರಿಗಳಿವೆ. ಇವುಗಳ ಒಟ್ಟು ಉದ್ದ 6,572 ಕಿ.ಮೀ.ಗಳು.
• ಉತ್ತರ ಕನ್ನಡ, ವಿಜಯಪುರ, ಬೆಳಗಾವಿ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ತುಮಕೂರು, ದಕ್ಷಿಣ ಕನ್ನಡ ಹಾಗೂ ಬಳ್ಳಾರಿ ಜಿಲ್ಲೆಗಳು ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿವೆ.
• ರಾಯಚೂರು ಮತ್ತು ಕೊಡಗು ಜಿಲ್ಲೆಗಳು ಯಾವುದೇ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿಲ್ಲ.
• ರಾಷ್ಟ್ರೀಯ ಹೆದ್ದಾರಿ NH - 4 ಮತ್ತು NH - 7 ಗಳು ರಾಷ್ಟ್ರೀಯ ಹೆದ್ದಾರಿಗಳು ಪ್ರಾಧಿಕಾರದ ‘ಸುವರ್ಣ ಚತುಷ್ಕೋನ ಹೆದ್ದಾರಿ ಯೋಜನೆ’ ಹಾಗೂ ‘ಕಾರಿಡಾರ್ ಯೋಜನೆ’ಗಳಿಗೆ ಸೇರಿವೆ. ಅವು ಆರು ಪಥಗಳನ್ನು
• ಹೊಂದಿವೆ. ರಾಜ್ಯದಲ್ಲಿ ಹಾಯ್ದು ಹೋಗುವ ಇತರೆ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳೆಂದರೆ NH 4, NH 4A , NH 7, NH 9, NH - 13, NH - 17, NH 48, NH 63, NH 67 NH 206, NH 207, NH 209, NH 212 ಮತ್ತು NH 218.

2) ರಾಜ್ಯ ಹೆದ್ದಾರಿಗಳು :


• ರಾಜಧಾನಿ ಬೆಂಗಳೂರಿನಿಂದ ಜಿಲ್ಲಾ ಕೇಂದ್ರ, ಪ್ರಮುಖ ಪಟ್ಟಣಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳೊಡನೆ ಸಂಪರ್ಕಿಸುವ ರಸ್ತೆಗಳಿಗೆ ‘ರಾಜ್ಯ ಹೆದ್ದಾರಿ’ ಎಂದು ಕರೆಯುವರು.
• ಇವುಗಳ ನಿರ್ಮಾಣ-ನಿರ್ವಹಣೆ ರಾಜ್ಯ ಸರ್ಕಾರಗಳಿಗೆ ಸೇರಿದೆ.
• ಕರ್ನಾಟಕ ರಾಜ್ಯದಲ್ಲಿ 19,578 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳಿವೆ.
• ಬೆಳಗಾವಿ ಜಿಲ್ಲೆ ಅತಿ ಉದ್ದದ ರಾಜ್ಯ ಹೆದ್ದಾರಿ ಹೊಂದಿರುವ ಜಿಲ್ಲೆಯಾಗಿದೆ.
• ಬೆಂಗಳೂರು ಅತಿ ಕಡಿಮೆ ಉದ್ದದ ರಾಜ್ಯ ಹೆದ್ದಾರಿಯುಳ್ಳ ಜಿಲ್ಲೆಯಾಗಿದೆ. ಏಕೆಂದರೆ ಇಲ್ಲಿ ನಗರ ರಸ್ತೆಗಳು ಹೆಚ್ಚು.

3) ಜಿಲ್ಲಾ ರಸ್ತೆಗಳು :


• ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ, ಪ್ರಮುಖ ಪಟ್ಟಣ, ಗ್ರಾಮಗಳು,ರೈಲು ಮಾರ್ಗ ಹಾಗೂ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಜಿಲ್ಲಾ ರಸ್ತೆಗಳೆನ್ನುವರು.
• ಇವುಗಳ ನಿರ್ಮಾಣ ಅಭಿವೃದ್ಧಿ ಮೇಲ್ವಿಚಾರಣೆಯು ‘ಜಿಲ್ಲಾ ಪಂಚಾಯತ್’ಗೆ ಸೇರಿರುತ್ತದೆ.
• ರಾಜ್ಯದಲ್ಲಿ ಒಟ್ಟು 49,909 ಕಿ.ಮೀ. ಉದ್ದದ ಜಿಲ್ಲಾ ರಸ್ತೆಗಳಿವೆ.
• ತುಮಕೂರು ಜಿಲ್ಲೆ ಹೆಚ್ಚು ಜಿಲ್ಲಾ ರಸ್ತೆಗಳನ್ನೊಳಗೊಂಡಿದೆ.
• ರಾಯಚೂರು ಜಿಲ್ಲೆ ಕಡಿಮೆ ಜಿಲ್ಲಾ ರಸ್ತೆಗಳನ್ನೊಳಗೊಂಡಿದೆ.

4) ಗ್ರಾಮೀಣ ರಸ್ತೆಗಳು :


• ತಾಲ್ಲೂಕು ಕೇಂದ್ರದಿಂದ ಪ್ರತಿಯೊಂದು ಗ್ರಾಮಗಳಿಗೂ, ಎಲ್ಲಾ ಜಿಲ್ಲಾ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೇ ‘ಗ್ರಾಮೀಣ ರಸ್ತೆ’ಗಳು.
• ಇವುಗಳ ನಿರ್ಮಾಣ, ನಿರ್ವಹಣೆ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸೇರಿರುತ್ತದೆ.
• ಕರ್ನಾಟಕ ರಾಜ್ಯದಲ್ಲಿ ಒಟ್ಟು 1,77,542ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳಿವೆ.
• ಮೇಲ್ಕಂಡ ವರ್ಗದ ರಸ್ತೆಗಳಲ್ಲದೆ, ವಿವಿಧ ಉದ್ದೇಶ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಗಳ ಅಧೀನದ ರಸ್ತೆಗಳಿವೆ. ಉದಾ : ಲೋಕೋಪಯೋಗಿ ರಸ್ತೆ, ಅರಣ್ಯ ಇಲಾಖೆ, ನೀರಾವರಿ ಇಲಾಖೆ ಹಾಗೂ ಪುರಸಭೆ- ನಗರಪಾಲಿಕೆ ರಸ್ತೆಗಳು.

ರೈಲು ಸಾರಿಗೆ


• ಕರ್ನಾಟಕದಲ್ಲಿ ಮೊಟ್ಟಮೊದಲು ರೈಲು ಸಂಚಾರ ಆರಂಭವಾಗಿದ್ದು 1864 ರಲ್ಲಿ, ಇದನ್ನು ಬೆಂಗಳೂರು ಮತ್ತು ಮದರಾಸು ನಗರಗಳ ಮಧ್ಯೆ ‘ಮದರಾಸು ರೈಲ್ವೆ ಕಂಪನಿ’ಯು ನಿರ್ಮಿಸಿತು.
• 1956 ರ ವೇಳೆಗೆ ಒಟ್ಟು 2595 ಕಿ.ಮೀ.ಗಳಿದ್ದು ಅದು ದಕ್ಷಿಣ ರೈಲ್ವೆ ವಲಯಕ್ಕೆ ಸೇರಿತ್ತು.
• ಈಗ ನೈಋತ್ಯ ರೈಲ್ವೆ ವಲಯವು ಅಸ್ತಿತ್ವಕ್ಕೆ ಬಂದಿದೆ. ಅದರ ಆಡಳಿತ ಕೇಂದ್ರ ಹುಬ್ಬಳ್ಳಿಯಲ್ಲಿದೆ.
• ಕರ್ನಾಟಕದಲ್ಲಿ ಇಂದು ಒಟ್ಟು 3244 ಕಿ.ಮೀ ಉದ್ದದ ರೈಲು ಮಾರ್ಗಗಳಿವೆ.
• ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ರೈಲು ಮಾರ್ಗಗಳು ಸಮನಾಗಿ ಹಂಚಿಕೆಯಾಗಿಲ್ಲ. ಬೆಂಗಳೂರು, ಬಳ್ಳಾರಿ, ಬೆಳಗಾವಿ, ಹಾಸನ, ಉತ್ತರ ಕನ್ನಡ, ಚಿತ್ರದುರ್ಗ, ಉಡುಪಿ, ರಾಮನಗರ, ದಕ್ಷಿಣ ಕನ್ನಡ ಜಿಲ್ಲೆಗಳು ಸರಾಸರಿ 150-200 ಕಿ.ಮೀ. ಉದ್ದದ ರೈಲು ಮಾರ್ಗಗಳನ್ನು ಹೊಂದಿರುತ್ತವೆ.
• ಕೊಡಗು ಜಿಲ್ಲೆಯು ಯಾವುದೇ ರೈಲು ಮಾರ್ಗವನ್ನು ಹೊಂದಿರುವುದಿಲ್ಲ.

ವಾಯು ಸಾರಿಗೆ


• ವಾಯು ಸಾರಿಗೆ ಅತಿ ವೇಗ ಚಾಲಿತ ಸಾರಿಗೆ ಮಾಧ್ಯಮ.
• ಕರ್ನಾಟಕದಲ್ಲಿ ಮೊದಲ ವಿಮಾನ ಯಾನವನ್ನು 1946 ರಲ್ಲಿ ಬೆಂಗಳೂರು - ಹೈದರಾಬಾದ್ ನಡುವೆ‘ಡೆಕ್ಕನ್ ಏರ್ವೇಸ್’ ಎಂಬ ಕಂಪನಿಯು ಪ್ರಾರಂಭಿಸಿತು.
• ಭಾರತೀಯ ವಿಮಾನ ಸಂಚಾರವು 1953 ರಲ್ಲಿ ರಾಷ್ಟ್ರೀಕರಣಗೊಂಡು, ಇಂಡಿಯನ್ ಏರ್ಲೈನ್ಸ್ ಸಂಸ್ಥೆ ಆರಂಭಗೊಂಡ ಮೇಲೆ ಬೆಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ವಿಮಾನಯಾನದ ಸೌಲಭ್ಯವನ್ನು ಕಲ್ಪಿಸಲಾಯಿತು.
• ರಾಜ್ಯದ ರಾಜಧಾನಿಯಾದ ಬೆಂಗಳೂರು 1996 ರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲ್ಪಟ್ಟಿತ್ತು. ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಮಂಗಳೂರುಗಳಲ್ಲಿ ದೇಶೀಯ ವಿಮಾನ ನಿಲ್ದಾಣಗಳಿವೆ. ಹೊಸದಾಗಿ ಹಾಸನ, ಕಲಬುರಗಿ(ಗುಲ್ಬರ್ಗ)ಗಳಲ್ಲಿ ನಿರ್ಮಾಣಗೊಳ್ಳಲಿವೆ.
• ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಮೊದಲ ‘ಹಸಿರು ಕ್ಷೇತ್ರದ ವಿಮಾನ ನಿಲ್ದಾಣ’ವಾಗಿದೆ.

ಜಲ ಸಾರಿಗೆ


• ಕರ್ನಾಟಕದಲ್ಲಿ ಒಳನಾಡಿನ ಮತ್ತು ಸಮುದ್ರ ಜಲಸಂಚಾರಗಳೆರಡೂ ರೂಢಿಯಲ್ಲಿವೆ.
• ಒಳನಾಡಿನ ಜಲಸಂಚಾರವು ಯಂತ್ರಚಾಲಿತ ದೋಣಿಗಳ ಸಂಚಾರ ರೂಢಿಗೆ ಬಂದಿದೆ. ಇದು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವುದು. ಈ ಜಿಲ್ಲೆಗಳಲ್ಲಿ ಹರಿಯುವ ಗಂಗಾವಳಿ, ಕಾಳಿ, ಶರಾವತಿ, ಹಾಲಾಡಿ, ಚಕ್ರ, ಕೊಲ್ಲೂರು (ಉಡುಪಿ ಜಿಲ್ಲೆ), ನೇತ್ರಾವತಿ ನದಿಗಳು ಮುಖ್ಯ ಒಳನಾಡಿನ ಜಲಸಾರಿಗೆಯನ್ನು ಪೂರೈಸುತ್ತವೆ.
• ಬಂದರುಗಳು : ಹಡಗು ನಿಲ್ಲುವ ಸಮುದ್ರ ತೀರದ ಸ್ಥಳಗಳನ್ನು ಬಂದರುಗಳೆನ್ನುವರು.
• ಮೀನುಗಾರಿಕೆ, ವ್ಯಾಪಾರ, ಜನರ ಪ್ರಯಾಣ ಮತ್ತು ಸರಕುಗಳ ಸಾಗಾಣಿಕೆಗಳಿಗೆ ಹಡಗುಗಳನ್ನು ಬಳಸುತ್ತಾರೆ. ಕರ್ನಾಟಕದಲ್ಲಿ ಸುಮಾರು 25 ಸಣ್ಣ ಮತ್ತು ದೊಡ್ಡ ಪ್ರಮಾಣದ ಬಂದರುಗಳಿವೆ.
• 1957 ರಲ್ಲಿ ಬಂದರು ಅಭಿವೃದ್ಧಿ ಇಲಾಖೆಯು ಸ್ಥಾಪಿತಗೊಂಡು ಸೌಲಭ್ಯಗಳ ವಿಸ್ತರಣೆ ಆರಂಭಗೊಂಡಿತು.
• ‘ನವ ಮಂಗಳೂರು’ 1974 ರ ಮೇ 4 ರಂದು ಭಾರತದ ಒಂಬತ್ತನೆಯ ‘ಪ್ರಮುಖ ಬಂದರು’ ಎಂದು ಘೋಷಿಸಲ್ಪಟ್ಟಿತು. ಇದನ್ನು ‘ಕರ್ನಾಟಕದ ಹೆಬ್ಬಾಗಿಲು’ ಎಂದು ಕರೆಯುವರು. ಈ ಬಂದರಿನಿಂದ ಕಬ್ಬಿಣದ ಅದಿರು, ಕಾಫಿ, ಸಾಂಬಾರ ಪದಾರ್ಥಗಳು, ಗೋಡಂಬಿ, ಶ್ರೀಗಂಧ, ಹೆಂಚು, ಕ್ರೋಮೈಡ್, ಗ್ರಾನೈಟ್ ಶಿಲೆ, ಸಂಸ್ಕರಿಸಿದ ಹಣ್ಣು ಮತ್ತು ಮೀನುಗಳು ರಫ್ತಾಗುತ್ತವೆ. ಪೆಟ್ರೋಲಿಯಂ ಆಮದಾಗುತ್ತದೆ.
• ಇದರ ಜೊತೆಗೆ ರಾಜ್ಯವು 10 ಚಿಕ್ಕ ಬಂದರುಗಳನ್ನು ಅಭಿವೃದ್ಧಿಪಡಿಸಿದೆ. ಅವುಗಳೆಂದರೆ ಹಳೆಯ ಮಂಗಳೂರು ಬಂದರು, ಮಲ್ಪೆ, ಹಂಗಾರಕಟ್ಟೆ, ಕುಂದಾಪುರ, ಪಡುಬಿದ್ರಿ, ಭಟ್ಕಳ, ಹೊನ್ನಾವರ, ಬೇಲೆಕೇರಿ, ತದ್ರಿ ಮತ್ತು ಕಾರವಾರ.
• ಕಾರವಾರ ಬಂದರು ಅತಿ ಸುಂದರವಾದ ಬಂದರು ಎಂದು ಪ್ರಸಿದ್ಧಿಯಾಗಿದೆ. ಇದು ಸರ್ವಋತು ಬಂದರಾಗಿದ್ದು ತನ್ಮೂಲಕ ಕಬ್ಬಿಣದ ಅದಿರು, ಮ್ಯಾಂಗನೀಸ್, ಗ್ರಾನೈಟ್ ಹಾಗೂ ವ್ಯವಸಾಯೋತ್ಪನ್ನಗಳು ರಫ್ತಾಗುತ್ತವೆ.