ಕರ್ನಾಟಕದ ಭೂ ಸ್ವರೂಪಗಳು (Karnataka : Landforms)

 

• ಕರ್ನಾಟಕ ರಾಜ್ಯವು ಭಾರತದ ಪರ್ಯಾಯ ದ್ವೀಪದ ಒಂದು ಭಾಗವಾಗಿದ್ದು, ವೈವಿಧ್ಯಮಯ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿದೆ. ಇದರ ದಕ್ಷಿಣ ಭಾಗವು ಏರು-ತಗ್ಗುಗಳುಳ್ಳ ಭೂಸ್ವರೂಪಗಳನ್ನು ಹೊಂದಿದ್ದರೆ ಉತ್ತರ ಭಾಗವು ವಿಶಾಲವಾದ ಬಯಲು ಸೀಮೆಯಾಗಿದೆ.
• ಕರಾವಳಿ ಮತ್ತು ಮಲೆನಾಡುಗಳಲ್ಲಿ ವಿರುದ್ಧ ಸ್ವರೂಪಗಳಿವೆ. ಪೂರ್ವದ ಕಡೆಗೆ ಸಾಧಾರಣ ಇಳಿಜಾರು ಮತ್ತು ಪಶ್ಚಿಮಕ್ಕೆ ಕಡಿದಾದ ಇಳಿಜಾರಾಗಿದೆ. ಅಲ್ಲಲ್ಲಿ ಬೆಟ್ಟಗಳ ಸಾಲುಗಳಿದ್ದು, ನಡುವೆ ಕಣಿವೆ ಕಂದರಗಳು ಕಂಡುಬರುವವು.

ಭೂ ಸ್ವರೂಪದ ವಿಧಗಳು


ಭೂರಚನೆ ಮತ್ತು ಮೇಲ್ಮೈ ಲಕ್ಷಣಗಳನ್ನಾಧರಿಸಿ ಕರ್ನಾಟಕವನ್ನು ಮೂರು ಪ್ರಮುಖ ಭೂ ಸ್ವರೂಪಗಳನ್ನಾಗಿ ವಿಂಗಡಿಸಲಾಗಿದೆ :
(1) ಕರಾವಳಿ ಮೈದಾನ
(2) ಮಲೆನಾಡು
(3) ಮೈದಾನ ಪ್ರದೇಶ.

(1) ಕರಾವಳಿ ಮೈದಾನ


• ಈ ಪ್ರಾಕೃತಿಕ ವಿಭಾಗವು ಅರಬ್ಬೀ ಸಮುದ್ರ ಮತ್ತು ಮಲೆನಾಡುಗಳ ಮಧ್ಯೆ ವಿಸ್ತರಿಸಿದೆ. ಇದು ದಕ್ಷಿಣದಲ್ಲಿ ಮಂಗಳೂರಿನಿಂದ ಉತ್ತರದಲ್ಲಿ ಕಾರವಾರದವರೆಗೆ 320 ಕಿ.ಮೀ. ಉದ್ದವಿದೆ ಹಾಗೂ 12 ರಿಂದ 64 ಕಿ.ಮೀ. ಅಗಲವಾಗಿದೆ.
• ದಕ್ಷಿಣದಲ್ಲಿ ಅಗಲವಾಗಿದ್ದು ಉತ್ತರದ ಕಡೆಗೆ ಕಿರಿದಾಗುತ್ತಾಕಡಿದಾದ ಇಳಿಜಾರಿನಿಂದ ಕೂಡಿದೆ. ಇದರ ಎತ್ತರ ಸಮುದ್ರ ಮಟ್ಟದಿಂದ 200 ಮೀಟರ್ಗಳನ್ನು ಮೀರುತ್ತದೆ. ಇದನ್ನು ‘ಕೆನರಾ ಅಥವಾ ಕರ್ನಾಟಕ ಕರಾವಳಿ’ ಎಂದೇ ಕರೆಯುವರು.
• ಕರಾವಳಿಯ ಉದ್ದಕ್ಕೂ ಅನೇಕ ಬಂದರುಗಳಿವೆ. ಅವುಗಳಲ್ಲಿ ‘ನವ ಮಂಗಳೂರು’ ಬಂದರು ಕರ್ನಾಟಕದ ಅತಿ ದೊಡ್ಡ ಬಂದರಾಗಿದೆ. ಭಟ್ಕಳ, ಮಲ್ಪೆ, ಕಾರವಾರ, ಕುಮಟ, ಬೇಲೆಕೆರಿ ಮತ್ತು ಹೊನ್ನಾವರಗಳು ಮೀನುಗಾರಿಕಾ ಬಂದರುಗಳು.
• ಕೃಷಿಯೂ ಸಹ ಮತ್ತೊಂದು ಪ್ರಮುಖ ವೃತ್ತಿಯಾಗಿದೆ. ಇಲ್ಲಿ ಗೋಡಂಬಿ, ತೆಂಗು, ಅಡಕೆ, ಏಲಕ್ಕಿ, ಭತ್ತ ಮೊದಲಾದ ಬೆಳೆಗಳನ್ನು ಬೆಳೆಯುವರು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಕರಾವಳಿಯ ಜಿಲ್ಲೆಗಳಾಗಿವೆ.

(2) ಮಲೆನಾಡು


• ಮಲೆನಾಡು ಉತ್ತರ ದಕ್ಷಿಣವಾಗಿ ಕರಾವಳಿಗೆ ಸಮಾನಾಂತರವಾಗಿ ಹಬ್ಬಿವೆ. ಪಶ್ಚಿಮ ಭಾಗವು ಕಡಿದಾದ ಇಳಿಜಾರನ್ನು ಹೊಂದಿದ್ದು, ಪೂರ್ವದ ಕಡೆಗೆ ಹೋದಂತೆ ನಿಧಾನವಾಗಿ ಹಂತ ಹಂತವಾಗಿ ಇಳಿಜಾರಾಗುತ್ತಾ ಹೋಗುತ್ತದೆ. ಆದ್ದರಿಂದಲೇ ಇದನ್ನು ಘಟ್ಟಗಳೆಂದು ಕರೆಯುತ್ತಾರೆ.
• ಇದರ ಉದ್ದ 650 ಕಿ.ಮೀ. ಅಗಲ 50-76 ಕಿ.ಮೀ.ಗಳು. ಸರಾಸರಿ ಎತ್ತರವು ಸಮುದ್ರ ಮಟ್ಟಕ್ಕೆ 900 ರಿಂದ 1500 ಮೀ.ಗಳು. ಇದು ಅರಬ್ಬೀ ಸಮುದ್ರದಿಂದ ಬೀಸುವ ಮಳೆ ಮಾರುತಗಳನ್ನು ತಡೆದು 200 ಸೆಂ.ಮೀ.ಗಿಂತ ಹೆಚ್ಚು ಮಳೆ ಪಡೆಯುತ್ತದೆ.
• ಇಲ್ಲಿನ ಅತಿ ಎತ್ತರವಾದ ಶಿಖರಗಳೆಂದರೆ ಮುಳ್ಳಯ್ಯನ ಗಿರಿ ಇದು 1,923 ಮೀಟರ್ ಎತ್ತರವಾಗಿದ್ದು ದಕ್ಷಿಣ ಭಾರತದಲ್ಲಿ ಅತಿ ಎತ್ತರದ ಗಿರಿಧಾಮವಾಗಿದೆ.
• ಇದಲ್ಲದೆ ಬಲ್ಲಾಳರಾಯನದುರ್ಗ, ಮೆರ್ತಿಗುಡ್ಡ, ಪುಷ್ಪಗಿರಿ, ಕೊಡಚಾದ್ರಿ ಪಶ್ಚಿಮ ಘಟ್ಟದ ಇತರ ಉನ್ನತ ಶಿಖರಗಳಾಗಿವೆ.
• ಮಲೆನಾಡು ಕರ್ನಾಟಕದ ಹಲವು ನದಿಗಳ ಉಗಮಸ್ಥಾನವಾಗಿದ್ದು, ಇಲ್ಲಿಂದ ಕಡಿದಾದ ಇಳಿಜಾರಿನಲ್ಲಿ ರಭಸದಿಂದ ಹರಿಯುತ್ತಾ ಅನೇಕ ಜಲಪಾತಗಳನ್ನು ನಿರ್ಮಿಸಿವೆ. ಅವುಗಳಲ್ಲಿ ಭಾರತದಲ್ಲೇ ಎತ್ತರವಾದ ಜೋಗ್ ಜಲಪಾತ (ಶರಾವತಿ ನದಿ) ಸೇರಿದಂತೆ ಉಂಚಳ್ಳಿ, ಮಾಗೋಡು, ಗೋಕಾಕ್, ಶಿವನಸಮುದ್ರ, ಅಬ್ಬಿ ಜಲಪಾತಗಳು ಪ್ರಮುಖವಾಗಿವೆ. ಜೊತೆಗೆ ಕಣಿವೆ ಮತ್ತು ಕಂದರಗಳನ್ನೂ ನಿರ್ಮಿಸಿವೆ.
• ಇಲ್ಲಿ ಕಾಫಿ, ಚಹ, ರಬ್ಬರ್ ಮತ್ತು ಸಾಂಬಾರ ಪದಾರ್ಥಗಳನ್ನು ಹೇರಳವಾಗಿ ಬೆಳೆಯಲಾಗುತ್ತದೆ.ಅಧಿಕ ಕಾಫಿ ಬೆಳೆಯುವುದರಿಂದ ಚಿಕ್ಕಮಗಳೂರನ್ನು ‘ಕಾಫಿನಾಡು’ ಎನ್ನುವರು.
• ಕೊಡಗು ಜಿಲ್ಲೆಯಲ್ಲಿ ತಂಪಾದ ವಾತಾವರಣವಿರುವುದರಿಂದ ‘ಕರ್ನಾಟಕದ ಕಾಶ್ಮೀರ’ ಎಂದು ಕರೆಯುವರು ಹಾಗೂ ಇಲ್ಲಿ ಕಿತ್ತಳೆ ಹಣ್ಣನ್ನು ಹೆಚ್ಚಾಗಿ ಬೆಳೆಯುವುದರಿಂದ ‘ಕಿತ್ತಳೆನಾಡು’ ಎಂದೂ ಕರೆಯುವರು.

ಪ್ರಮುಖ ಘಟ್ಟ ಮಾರ್ಗಗಳು


1. ಚಾರ್ಮಾಡಿ ಘಾಟ್: ಮಂಗಳೂರು ಮತ್ತು ಚಿಕ್ಕಮಗಳೂರುಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.
2. ಶಿರಾಡಿ ಘಾಟ್ : ಹಾಸನ - ಸಕಲೇಶಪುರ -ಮಂಗಳೂರುಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.
3. ಆಗುಂಬೆ ಘಾಟ್ : ಶಿವಮೊಗ್ಗ ಮತ್ತು ಉಡುಪಿಯ ನಡುವೆ ಸಂಪರ್ಕ ಕಲ್ಪಿಸುತ್ತದೆ.
4. ಹುಲಿಕಲ್ ಘಾಟ್ : ಶಿವಮೊಗ್ಗ – ಕುಂದಾಪುರ ನಡುವೆ ಸಂಪರ್ಕ ಕಲ್ಪಿಸುತ್ತದೆ.

(3) ಮೈದಾನ ಪ್ರದೇಶ.


• ಮಲೆನಾಡಿನ ಪೂರ್ವದಿಕ್ಕಿನಲ್ಲಿ ವಿಶಾಲ ಮೈದಾನವಿದ್ದು, ಸರಾಸರಿ 450 ರಿಂದ 760 ಮೀ. ಎತ್ತರದಲ್ಲಿದೆ. ಇದು ಕೃಷ್ಣಾ, ತುಂಗಭದ್ರಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳನ್ನು ಹೊಂದಿದ್ದು, ಇಲ್ಲಿ ಅನೇಕ ಕಡೆ ಬೆಟ್ಟಗುಡ್ಡಗಳ ಸಾಲುಗಳು ಕಂಡುಬರುತ್ತವೆ. ಇದು ಪೂರ್ವದ ಕಡೆಗೆ ಇಳಿಜಾರನ್ನು ಹೊಂದಿದೆ.
• ಉತ್ತರದಿಂದ ದಕ್ಷಿಣಕ್ಕೆ ಎತ್ತರ ಹೆಚ್ಚಾಗುತ್ತದೆ. ಇದನ್ನು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ;

1. ಉತ್ತರದ ಮೈದಾನ


• ಇದು ಕಪ್ಪುಮಣ್ಣಿನಿಂದ ಕೂಡಿದ ಬಯಲು ಪ್ರದೇಶ ಮತ್ತು ವಿಸ್ತಾರವಾದ ಪ್ರಸ್ಥಭೂಮಿಯಾಗಿದೆ.
• ಸಮುದ್ರಮಟ್ಟದಿಂದ ಸರಾಸರಿ 365 ರಿಂದ 610 ಮೀ.ಗಳಷ್ಟು ಎತ್ತರವಾಗಿದೆ. ಅವುಗಳಲ್ಲಿ ನರಗುಂದ ಬೆಟ್ಟ, ಪರಸಗಡ ಗುಡ್ಡ , ಇಳಕಲ್ ಗುಡ್ಡ ಪ್ರಮುಖವಾಗಿವೆ.
• ಸುಮಾರು 62 ಮೀ. ಎತ್ತರದಿಂದ ಧುಮುಕುವ ಘಟಪ್ರಭಾ ನದಿಯ ಗೋಕಾಕ್ ಜಲಪಾತ ಇಲ್ಲಿ ಪ್ರಸಿದ್ಧವಾಗಿದೆ. ಇದಲ್ಲದೆ ಛಾಯ ಭಗವತಿ ಹಾಗೂ ಸೊಗಲ ಜಲಪಾತಗಳು ಉತ್ತರದ ಮೈದಾನದಲ್ಲಿವೆ.
• ಬೇಸಿಗೆಯಲ್ಲಿ ಅಧಿಕ ಉಷ್ನಾಂಶವಿರುವುದರಿಂದ ಇದನ್ನು ‘ಬಿಸಿಲ ನಾಡು’ ಎನ್ನುವರು
• ಈ ಭಾಗದಲ್ಲಿ ಒಣ ಬೇಸಾಯದ ಬೆಳೆಗಳಾದ ಜೋಳ, ಸಜ್ಜೆ, ಶೇಂಗಾ, ಹತ್ತಿ ಮತ್ತು ಬೇಳೆಕಾಳು ಬೆಳೆಗಳನ್ನು ಬೆಳೆಯಲಾಗುತ್ತದೆ.
• ಬೀದರ್, ವಿಜಯಪುರ, ಕಲಬುರಗಿ, ಯಾದಗಿರಿ, ಗದಗ, ಕೊಪ್ಪಳ,ರಾಯಚೂರು, ಬಳ್ಳಾರಿ, ಹಾವೇರಿ, ಬಾಗಲಕೋಟೆ ಜಿಲ್ಲೆಗಳು ಹಾಗೂ ಧಾರವಾಡ ಮತ್ತು ಬೆಳಗಾವಿಯ ಕೆಲ ಭಾಗಗಳು ಉತ್ತರದ ಮೈದಾನದಲ್ಲಿವೆ.

2. ದಕ್ಷಿಣದ ಮೈದಾನ


• ಇದು ಉತ್ತರದಲ್ಲಿ ತುಂಗಭದ್ರಾ ನದಿ ಪಾತ್ರದಿಂದ ದಕ್ಷಿಣದ ಚಾಮರಾಜನಗರ ಜಿಲ್ಲೆಯವರೆಗೂ ಹಬ್ಬಿದೆ. ಇದು ಬಹಳಷ್ಟು ಕೆಂಪುಮಣ್ಣಿನಿಂದ ಕೂಡಿರುವ ಪ್ರಸ್ಥಭೂಮಿ.
• ತುಮಕೂರು ಜಿಲ್ಲೆಯ ಮಧುಗಿರಿ ಬೆಟ್ಟ. ಇದು ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಏಕಶಿಲಾ ಬೆಟ್ಟವಾಗಿದೆ.
• ಈ ಪ್ರದೇಶವೂ ಮಳೆ ನೆರಳಿನ ಪ್ರದೇಶದ ಭಾಗವಾಗಿದೆ.
• ಕಾವೇರಿ, ಪಾಲಾರ್, ಪೆನ್ನಾರ್ ಇಲ್ಲಿ ಹರಿಯುತ್ತಿರುವ ಪ್ರಮುಖ ನದಿಗಳು.
• ರಾಗಿ, ಭತ್ತ, ಕಬ್ಬು, ಶೇಂಗಾ, ಹಿಪ್ಪುನೇರಳೆ, ತರಕಾರಿಗಳು, ಹಣ್ಣು, ಹೂವುಗಳು ಈ ಭಾಗದ ಪ್ರಮುಖ ಬೆಳೆಗಳಾಗಿವೆ.
• ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳು ದಕ್ಷಿಣದ ಮೈದಾನದಲ್ಲಿವೆ.