ಕೈಗಾರಿಕಾ ವಲಯ(Industrial Zone)

 

ಆರ್ಥಿಕಾಭಿವೃದ್ದಿಯಲ್ಲಿ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ.ವಾಸ್ತವವಾಗಿ ಕೈಗಾರೀಕರಣ ಮತ್ತು ಆರ್ಥಿಕಾಭಿವೃದ್ಧಿ ಒಂದೇ ಎಂದು ಭಾವಿಸಲಾಗಿದೆ.ಕೈಗಾರಿಕೆಗಳು ಒಂದು ರಾಷ್ಟ್ರದ ಕಣ್ಣಿದ್ದ ಹಾಗೆ.ಕೈಗಾರಿಕಾಭಿವೃದ್ಧಿಯಿಲ್ಲದ ಯಾವುದೇ ರಾಷ್ಟ್ರದ ಆರ್ಥಿಕಾಭಿವೃದ್ಧಿಯನ್ನು ಊಹಿಸುವುದು ಕಷ್ಟವಾಗುತ್ತದೆ.ಅದರಲ್ಲೂ ಕೃಷಿ ಪ್ರಧಾನ ರಾಷ್ಟ್ರವಾದ ಭಾರತಕ್ಕೆ ಕೈಗಾರಿಕೆಗಳು ಬೇಕೇ ಬೇಕು."ಕೈಗಾರೀಕರಣ ಇಲ್ಲವೇ ವಿನಾಶ" ಎಂದು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಹೇಳಿರುವ ಮಾತು ಸತ್ಯವಾಗಿದೆ.

ಕೈಗಾರಿಕೆಗಳ ವರ್ಗಿಕರಣ


1. ಸಣ್ಣ ಪ್ರಮಾಣದ ಕೈಗಾರಿಕೆಗಳು


• ಬಂಡವಾಳ ಹೂಡಿಕೆ - 5 ಕೋಟಿ ರೂ. ಗಳಿಗಿಂತಲೂ ಕಡಿಮೆ.
• ಉದಾ:ಕಾಗದ,ಸಾಬೂನು,ಸಿದ್ಧ ಉಡುಪು,ಪೆಡರೇಖೆ, ಗಡಿಯಾರ ಮೊದಲಾದ ಉದ್ಯಮಗಳು.

2.ಮಾಧ್ಯಮ ಪ್ರಮಾಣದ ಉದ್ಯಮಗಳು


• ಬಂಡವಾಳ ಹೂಡಿಕೆ-5 ಕೋಟಿಗಿಂತಲೂ ಅಧಿಕ ಮತ್ತು 10 ಕೋಟಿಗಿಂತಲೂ ಕಡಿಮೆ.
• ಉದಾ:ಬಟ್ಟೆ ಉದ್ಯಮ,ವಿದ್ಯುತ್ ಬಿಡಿಬಾಗಗಳ ತಯಾರಿಕೆ,ಇತ್ಯಾದಿ

3.ಬೃಹತ್ ಪ್ರಮಾಣದ ಕೈಗಾರಿಕೆಗಳು


• ಬಂಡವಾಳ ಹೂಡಿಕೆ-10 ಕೋಟಿಗಿಂತಲೂ ಅಧಿಕ
• ಉದಾ:ಸಿಮೆಂಟ್,ಕಾಗದ,ಸಕ್ಕರೆ,ಕಬ್ಬಿಣ,ಬಾರಿ ಇಂಜಿನಿಯರಿಂಗ್ ವಸ್ತುಗಳು,ಇತ್ಯಾದಿ

ಭಾರತದ ಪ್ರಮುಖ ಕೈಗಾರಿಕೆಗಳು


ಭಾರತದಲ್ಲಿ ಸ್ವಾತಂತ್ರ್ಯಾ ನಂತರದ ಅವಧಿಯ ಎಲ್ಲ ಪಂಚವಾರ್ಷಿಕ ಯೋಜನೆಗಳಲ್ಲಿಯೂ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಯಿತು. ಕಳೆದ ಐದು ದಶಕಗಳಲ್ಲಿ ಭಾರತವು ಕೈಗಾರಿಕೆ ಮತ್ತು ತಾಂತ್ರಿಕತೆಯ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿ ಮಹತ್ವಪೂರ್ಣವಾಗಿದ್ದು. ಕೈಗಾರಿಕೆಗಳು ದೇಶದ ಸಮಗ್ರ ರಾಷ್ಟ್ರೀಯ ಆದಾಯದ ಶೇ.35 ರಷ್ಟು ಪೂರೈಸುತ್ತಿದ್ದು, ದೇಶದ ಒಟ್ಟು ಕಾರ್ಮಿಕರಲ್ಲಿ ಶೇ 16 ರಷ್ಟು ಜನರಿಗೆ ಉದ್ಯೋಗವನ್ನು ಕಲ್ಪಿಸಿವೆ. ಆದಾಯ ಹಾಗೂ ಉದ್ಯೋಗ ನೀಡಿಕೆಗಳೆಡರಲ್ಲಿಯೂ ಕೈಗಾರಿಕೆಗಳು ಭಾರತದಲ್ಲಿ ವ್ಯವಸಾಯದ ನಂತರ ಎರಡನೇ ಸ್ಥಾನದಲ್ಲಿವೆ. ದೇಶದ ಕೆಲವು ಭಾಗಗಳಲ್ಲಿ ಕೈಗಾರಿಕೆಗಳು ಹೆಚ್ಚು ಕೇಂದ್ರೀಕೃತವಾಗಿವೆ. ಇಂತಹವುಗಳನ್ನು ’ಕೈಗಾರಿಕಾ ವಲಯ’ ಎಂದು ಕರೆಯುತ್ತಾರೆ.
ಭಾರತದಲ್ಲಿ 8 ಪ್ರಧಾನ ಕೈಗಾರಿಕಾ ವಲಯಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ
1) ಹೂಗ್ಲಿ ಪ್ರದೇಶ
2) ಮುಂಬೈ - ಪೂನಾ
3) ಅಹಮದಾಬಾದ್ - ವಡೋದರ
4) ದಾಮೋದರ ಕಣಿವೆ
5) ದಕ್ಷಿಣದ ಕೈಗಾರಿಕಾ
6) ನ್ಯಾಷನಲ್ ಕ್ಯಾಪಿಟಲ್ ರೀಜನ(NCR)
7) ವಿಶಾಖಪಟ್ಟಣ - ಗುಂಟೂರು
8) ಕೊಲ್ಲಂ - ತಿರುವನಂತಪುರಂ

ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ


• ಈ ಕೈಗಾರಿಕೆಯು ಯಂತ್ರೋಪಕರಣ, ಹಡಗು, ರೈಲ್ವೆ, ಹಡಗು ನಿರ್ಮಾಣ, ವಿದ್ಯುತ್ ಯೋಜನೆ, ನೀರಾವರಿ ಯೋಜನೆ, ಕಟ್ಟಡ ನಿರ್ಮಾಣ, ಗೃಹ ನಿರ್ಮಾಣ ಮುಂತಾದ ಇನ್ನಿತರ ಹಲವಾರು ಕೈಗಾರಿಕೆಗಳಿಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ಒದಗಿಸುತ್ತದೆ. ಆದ್ದರಿಂದ ಈ ಕೈಗಾರಿಕೆಯನ್ನು ಮೂಲ ಕೈಗಾರಿಕೆ ಎಂದು ಕರೆಯುವರು.
• ಭಾರತದಲ್ಲಿ ಒಟ್ಟು 9 ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳಿವೆ.
• ದೇಶದಲ್ಲಿ ಪ್ರಥಮ ಉಕ್ಕಿನ ಕೈಗಾರಿಕೆಯು 1870 ರಲ್ಲಿ ಪಶ್ಚಿಮ ಬಂಗಾಳದ ’ಕುಲ್ಟಿ’ ಎಂಬಲ್ಲಿ ಬೆಂಗಾಲ್ ಐರನ್ ಕಂಪನಿ ಲಿ., ಸಂಸ್ಥೆಯಿಂದ ಸ್ಥಾಪಿತಗೊಂಡಿತು.
• 1907 ರಲ್ಲಿ ಟಾಟಾ ಐರನ್ ಅಂಡ್ ಸ್ಟೀಲ್ ಕಂಪನಿಯು ಜಮ್ ಶೆಡ್ ಪುರ ಬಳಿ ಹಾಗೂ 1919 ರಲ್ಲಿ ದಿ ಇಂಡಿಯನ್ ಐರನ್ ಅಂಡ್ ಸ್ಟೀಲ್ ಕಂಪನಿಯು ಪಶ್ಚಿಮ ಬಂಗಾಳದ ಬರ್ನಪುರ್ ಎಂಬಲ್ಲಿ ಉಕ್ಕಿನ ಸ್ಥಾವರವನ್ನು ಆರಂಭಿಸಿತು.
• 1923 ರಲ್ಲಿ ಮೈಸೂರು ರಾಜ್ಯ ಸಂಸ್ಥಾನವು ದಿ ಮೈಸೂರು ಐರನ್ ಅಂಡ್ ಸ್ಟೀಲ್ ವರ್ಕ್ಸ್ ಕೈಗಾರಿಕೆಯನ್ನು ಭದ್ರಾವತಿಯಲ್ಲಿ ಸ್ಥಾಪಿಸಲಾಯಿತು.

ಕಬ್ಬಿಣದ ಪ್ರಮುಖ ಅದಿರುಗಳು


1) ಹೆಮಟೈಟ್
2) ಮ್ಯಾಗ್ನಾಟೈಟ್
3) ಲಿಮೊನೈಟ್
4) ಸೈಡ್ ರೈಟ್

ಪ್ರಸ್ತುತ ಭಾರತದಲ್ಲಿರುವ ಕಬ್ಬಿಣ ಮತ್ತು ಉಕ್ಕಿನ ಮುಖ್ಯ ಕೈಗಾರಿಕೆಗಳು


1) ಟಾಟಾ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ (TISCO) ಜಮ್ ಶೆಡ್ ಪುರ - ಜಾರ್ಖಂಡ್
2) ಇಂಡಿಯನ್ ಐರನ್ ಅಂಡ್ ಸ್ಟೀಲ್ ಕಂಪನಿ (IISCO) ಬರ್ನಪುರ - ಪಶ್ಚಿಮಬಂಗಾಳ
3) ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಕಂಪನಿ (VISCO) ಭದ್ರಾವತಿ - ಕರ್ನಾಟಕ
4) ಬಿಲಾಯಿ ಐರನ್ ಅಂಡ್ ಸ್ಟೀಲ್ ಕಂಪನಿ, ಬಿಲಾಯಿ - ಛತ್ತೀಸ್ ಘಡ್
5) ಐರನ್ ಅಂಡ್ ಸ್ಟೀಲ್ ಕಂಪನಿ, ರೂಕ್ಕೆಲ - ಒರಿಸ್ಸಾ
6) ಐರನ್ ಅಂಡ್ ಸ್ಟೀಲ್ ಕಂಪನಿ, ದುರ್ಗಾಪುರ - ಪಶ್ಚಿಮ ಬಂಗಾಳ
7) ಐರನ್ ಅಂಡ್ ಸ್ಟೀಲ್ ಕಂಪನಿ, ಬೋಕಾರೋ - ಝಾರ್ಖಂಡ್
8) ಐರನ್ ಅಂಡ್ ಸ್ಟೀಲ್ ಕಂಪನಿ, ಸೇಲಂ - ತಮಿಳುನಾಡು
9) ಐರನ್ ಅಂಡ್ ಸ್ಟೀಲ್ ಕಂಪನಿ, ವಿಶಾಕಪಟ್ಟಣ - ಆಂಧ್ರಪ್ರದೇಶ
ಇತ್ತಿಚಿಗೆ ಅನೇಕ ಖಾಸಗಿ ಸಂಸ್ಥೆಗಳು ಉಕ್ಕಿನ ಕಾರ್ಖಾನೆಗಳನ್ನು ಸ್ಥಾಪಿಸುತ್ತಿದ್ದು, ಭಾರತದ ಉಕ್ಕಿನ ಉತ್ಪಾದನೆ ಹಾಗೂ ರಫ್ತಿಗೆ ಉತ್ತಮ ಅವಕಾಶವನ್ನು ಮಾಡಿಕೊಡುತ್ತದೆ. ಇದರಿಂದಾಗಿ ರಫ್ತು ಅಧಿಕಗೊಳ್ಳುತ್ತಿದೆ.

ಹತ್ತಿ ಬಟ್ಟೆ ಕೈಗಾರಿಕೆ


• ಹತ್ತಿ ಬಟ್ಟೆ ಕೈಗಾರಿಕೆಯ ಇತಿಹಾಸವು ಇತರೆ ಕೈಗಾರಿಕೆಗಳಿಂದ ಸುದೀರ್ಘವಾದುದು. ವಿವಿಧ ಬಗೆಯ ನಾರುಗಳಿಂದ ಬಟ್ಟೆಯನ್ನು ತಯಾರಿಸುವುದುನ್ನು ಜವಳಿ ಕೈಗಾರಿಕೆ ಎಂದು ಕರೆಯುತ್ತಾರೆ. ಜವಳಿ ಕೈಗಾರಿಕೆಯಲ್ಲಿ ಹತ್ತಿ ಬಟ್ಟೆ ಕೈಗಾರಿಕೆ, ಸೆಣಬಿನ ಕೈಗಾರಿಕೆ, ರೇಷ್ಮೆ ಕೈಗಾರಿಕೆ ಮತ್ತು ಕೃತಕ ನಾರಿನ ಬಟ್ಟೆ ತಯಾರಿಕೆ ಮೊದಲಾದವುಗಳಿವೆ. ದೇಶದಲ್ಲಿ ಈ ಕೈಗಾರಿಕೆ ಮೊದಲು 1854 ರಲ್ಲಿ ಮುಂಬೈ ಹಾಗೂ ಬರೂಚ್ ಗಳಲ್ಲಿ ಸ್ಥಾಪಿಸಲ್ಪಟ್ಟವು.
• ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯಗಳ ಬಹುಪಾಲು ಹತ್ತಿ ಬಟ್ಟೆ ಕೈಗಾರಿಕೆಗಳನ್ನು ಹೊಂದಿವೆ.
• ಮಹಾರಾಷ್ಟ್ರದ ಮುಂಬೈನಲ್ಲಿ ಅತಿ ಹೆಚ್ಚು ಹತ್ತಿ ಗಿರಣಿಗಳಿದ್ದು ಭಾರತದ ಅತಿ ಮುಖ್ಯ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರವಾಗಿದೆ. ಆದ್ದರಿಂದ ಇದನ್ನು ’ಭಾರತದ ಮ್ಯಾಂಜೆಸ್ಟರ್’ ಅಥವಾ ’ಭಾರತದ ಕಾಟನೋಪೋಲಿಸ್’ ಎನ್ನುವರು. ಏಕೆಂದರೆ ಮ್ಯಾಂಜೆಸ್ಟರ್ ಇಂಗ್ಲೆಂಡಿನ ಅತಿ ಪ್ರಮುಖ ಹತ್ತಿಬಟ್ಟೆ ಕೈಗಾರಿಕಾ ಕೇಂದ್ರವಾಗಿದೆ.
• ಇದಲ್ಲದೆ ಮಧ್ಯಪ್ರದೇಶದ ಇಂದೋರ್, ಉತ್ತರ ಪ್ರದೇಶದ ಕಾನ್ಪುರ, ಚೆನೈ, ನಾಗಪುರ, ಪಶ್ಚಿಮ ಬಂಗಾಳ, ಸೊಲ್ಲಾಪುರ, ಕೊಲ್ಕತ್ತಾ, ತಮಿಳುನಾಡಿನ ಕೊಯಿಮತ್ತೂರ, ಸೇಲಂ, ಗುಜರಾತಿನ ಸೂರತ್, ಕರ್ನಾಟಕದ ಬೆಂಗಳೂರು, ದಾವಣಗೆರೆ ಪ್ರಮುಖ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರಗಳಾಗಿವೆ.

ಸಕ್ಕರೆ ಕೈಗಾರಿಕೆ


• ಭಾರತೀಯರಿಗೆ ಪುರಾತನ ಕಾಲದಿಂದಲೂ ಸಕ್ಕರೆಯ ಉತ್ಪಾದನೆ ಬಳಕೆ ತಿಳಿದಿದೆ. ವಿಶ್ವದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಭಾರತವು ಬ್ರೆಜಿಲ್ ನಂತರದ ಎರಡನೇಯ ಸ್ಥಾನದಲ್ಲಿದೆ.
• ಭಾರತದ ಬಹಳಷ್ಟು ಕೈಗಾರಿಕೆಗಳು ಗಂಗಾ ನದಿಯ ಮೈದಾನ ಪ್ರದೇಶದಲ್ಲಿ ಸ್ಥಾಪಿತಗೊಂಡಿವೆ. ಈ ಕೈಗಾರಿಕೆಗಳನ್ನು ಹೊಂದಿರುವ ಪ್ರಮುಖ ರಾಜ್ಯಗಳೆಂದರೆ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಆಂದ್ರಪ್ರದೇಶ, ಮಧ್ಯಪ್ರದೇಶ ಮೊದಲಾದವುಗಳಾಗಿವೆ. ಭಾರತದಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯವಾಗಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು , ಗುಜರಾತ್ ಮತ್ತು ಆಂದ್ರಪ್ರದೇಶಗಳಿವೆ.
• ಉತ್ತರ ಪ್ರದೇಶದಲ್ಲಿ ದೇಶದಲ್ಲೇ ಅತಿ ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯವಾಗಿದೆ. ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯಲ್ಲಿ ಹೆಚ್ಚು ಸಕ್ಕರೆ ಉದ್ಯಮ ಇರುವುದರಿಂದ ಇದನ್ನು ಭಾರತದ ಜಾವಾ ಎಂದು ಕರೆಯುವರು.
• ಭಾರತದಿಂದ ಸಕ್ಕರೆಯು ಯು. ಎಸ್. ಎ. ಬ್ರಿಟನ್, ಇರಾನ, ಕೆನಡಾ, ಮಲೇಷಿಯಾ ದೇಶಗಳಿಗೆ ರಫ್ತಾಗುತ್ತದೆ.

ಅಲ್ಯೂಮಿನಿಯಂ ಕೈಗಾರಿಕೆ


• ಭಾರತವು ಉತ್ಪಾದಿಸುವ ಕಬ್ಬಿಣೇತರ ಲೋಹಗಳಲ್ಲಿ ಅಲ್ಯೂಮಿನಿಯಂ ಅತೀ ಮುಖ್ಯವಾದುದು.ಮೊಟ್ಟಮೊದಲ ಅಲ್ಯೂಮಿನಿಯಂ ಕೈಗಾರಿಕೆಯು 1944 ರಲ್ಲಿ ಪಶ್ಚಿಮ ಬಂಗಾಳದ ಜಯಕನಗರ ಎಂಬಲ್ಲಿ ಸ್ಥಾಪನೆಯಾಯಿತು.
• ಅಲ್ಯೂಮಿನಿಯಂ ಭೂತೊಗಟೆಯಲ್ಲಿ ಕಬ್ಬಿಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿದ್ದರೂ ಇದು ಕಬ್ಬಿಣದಷ್ಟು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮತ್ತು ಬಳಕೆಯಾಗುತ್ತಿಲ್ಲ. ಹಾಗೂ ಇದರ ಬೆಲೆಯೂ ದುಬಾರಿಯಾಗಿದೆ. ಇದಕ್ಕೆ ಪ್ರಮುಖ ಕಾರಣ ಅಲ್ಯೂಮಿನಿಯಂನ್ನು ಸಂಸ್ಕರಿಸಲು ಹೆಚ್ಚಿನ ಪ್ರಮಾಣದ ವಿದ್ಯುತ್ ನ ಅವಶ್ಯಕತೆಯಿದೆ. ಒಂದು ಟನ್ ಅಲ್ಯೂಮಿನಿಯಂ ಉತ್ಪಾದಿಸಲು ಸುಮಾರು 18573 ಕಿ.ವ್ಯಾ. ವಿದ್ಯುತ್ ಬೇಕಾಗುತ್ತದೆ.
• ಅಲ್ಯೂಮಿನಿಯಂ ಕೈಗಾರಿಕೆಯು ಪ್ರಮುಖ ಮೂರು ಅಂಶಗಳನ್ನು ಅವಲಂಬಿಸಿದೆ. ಅವುಗಳೆಂದರೇ
1) ವಿದ್ಯುಚ್ಚಕ್ತಿಯ ದೊರೆಯುವಿಕೆ, 2) ಬಾಕ್ಸೈಟ್ ನ ಪೂರೈಕೆ, 3) ಇತರ ಲೋಹ ಮತ್ತು ಬಂಡವಾಳದ ಪೂರೈಕೆ.
ಭಾರತದ ಪ್ರಮುಖ ಅಲ್ಯೂಮಿನಿಯಂ ಕಂಪನಿಗಳು
1) ಹಿಂದೂಸ್ಥಾನ್ ಅಲ್ಯೂಮಿನಿಯಂ ಕಂಪನಿ (HINDALCO)
2) ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ (NALCO)
3) ಭಾರತ್ ಅಲ್ಯೂಮಿನಿಯಂ ಕಂಪನಿ (BALCO)
4) ಇಂಡಿಯನ್ ಅಲ್ಯೂಮಿನಿಯಂ ಕಂಪನಿ (INDALCO)
5) ಮದ್ರಾಸ್ ಅಲ್ಯೂಮಿನಿಯಂ ಕಂಪನಿ (MALCO)

ಕಾಗದದ ಕೈಗಾರಿಕೆ


• ಕಾಗದವನ್ನು ಮೊದಲು ಬಳಸಿದವರು ಮತ್ತು ತಯಾರಿಸಿದವರು ಚೀನಾದವರು.
• ಕಾಗದದ ತಯಾರಿಕೆಗೆ ಅರಣ್ಯ ಆಧಾರಿತ ಕಚ್ಚಾವಸ್ತುಗಳು ಬೇಕಾಗಿರುವುದರಿಂದ ಇದನ್ನು ಅರಣ್ಯ ಆಧಾರಿತ ಕೈಗಾರಿಕೆಗಳ ಗುಂಪಿಗೆ ಸೇರಿಸಲಾಗಿದೆ.
• ಅರಣ್ಯ ಅಧಾರಿತ ಕೈಗಾರಿಕೆ ಎಂದರೆ ಅರಣ್ಯದಲ್ಲಿ ದೊರೆಯುವ ಕಚ್ಚಾವಸ್ತುಗಳನ್ನು ಬಳಸಿಕೊಂಡು ಸಿದ್ದವಸ್ತುಗಳನ್ನಾಗಿ ತಯಾರುಮಾಡುವ ಕೈಗಾರಿಕೆಯಾಗಿದೆ.
• ಭಾರತದಲ್ಲಿ ಕಂಡುಬರುವ ಕಾಗದದ ಕೈಗಾರಿಕೆಗಳು
• ಭಾರತದಲ್ಲಿ ಮೊದಲ ಕಾಗದದ ಕೈಗಾರಿಕೆಯು 1840ರಲ್ಲಿ ಪಶ್ಚಿಮ ಬಂಗಾಳದ ಸೆರಾಂಪುರದಲ್ಲಿ ಹೂಗ್ಲಿ ನದಿ ದಡದಲ್ಲಿ ಸ್ಥಾಪನೆಯಾಯಿತು.
• 1867ರಲ್ಲಿ ಮತ್ತೊಂದು ಕೈಗಾರಿಕೆಯು ಕೋಲ್ಕತ್ತಾದ ಬಳಿಯ ಬಾಲ್ಟಿ ಎಂಬ ನಗರದಲ್ಲಿ ಸ್ಥಾಪನೆಯಾಯಿತು.
• ದೇಶದ ಹೆಚ್ಚಿನ ಕಾಗದದ ಕೈಗಾರಿಕೆಗಳು ಪಶ್ಚಿಮ ಬಂಗಾಳದಲ್ಲಿ ಕಂಡುಬರುತ್ತವೆ. ಇದಲ್ಲದೆ ಮುಂಬೈ, ಅಮರಾವತಿ, ನಾಗಪುರ, ಚಿಂದ್ವಾರ, ಪೂನಾ, ನಾಸಿಕ, ಕರಾಡ, ಉತ್ತರ ಪ್ರದೇಶದ ರಾಜಮಂಡ್ರಿ, ತಿರುಪತಿ, ರಾಯಗಡ್, ಉತ್ತರ ಪ್ರದೇಶದ ವಾರಣಾಸಿ, ಮಿರತ, ಲಕ್ನೊ, ಗಾಜಿಯಾಬಾದ ಪ್ರಮುಖವಾಗಿವೆ.
• ನ್ಯೂಸ್ ಪ್ರಿಂಟ್ ಕಾಗದವನ್ನು ನಾರ್ವೆ, ಸ್ವೀಡನ್, ಯು ಎಸ್ ಎ ಮತ್ತು ಕೆನಡಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ.