ಬಡತನ(The poverty in India)

 

ಹಿಂದುಳಿದ ರಾಷ್ಟ್ರಗಳಲ್ಲಿ ಬಡತನ ಒಂದು ಗಂಭೀರ ಸಮಸ್ಯೆಯಾಗಿದೆ. ಅದು ಕೇವಲ ಆರ್ಥಿಕ ವಿಚಾರವಾಗಿರದೆ ಮಾನವನ ಪರಿಸ್ಥಿತಿಯೂ ಅಗಿದೆ. ಬಡತನ, ನೋವು, ಹಸಿವು, ನರಳುವಿಕೆ ಮತ್ತು ಹತಾಶೆಯ ಪರಿಸ್ಥಿತಿಯಾಗಿದೆ. ಭಾರತದಲ್ಲಿ ಬಡತನ ಎಂಬುದು ಒಂದು ಜ್ವಲಂತ ಸಮಸ್ಯೆಯಾಗಿದ್ದು ಅದು ಇತರ ಹಿಂದುಳಿದ ರಾಷ್ಟ್ರಗಳಂತೆ ಭಾರತವನ್ನು ಹತಾಶೆಯ ಪರಿಸ್ಥಿತಿಗೆ ತಳ್ಳಿದೆ. ಅನಕ್ಷರತೆ, ಹಸಿವು, ನೋವು ನರಳುವಿಕೆ, ಪೌಷ್ಠಿಕಾಂಶದ ಕೊರತೆ ಇವುಗಳು ಭಾರತದಲ್ಲಿ ಸಾಮಾನ್ಯ ಪರಿಸ್ಥಿತಿಗಳಾಗಿವೆ. ಸ್ವಾತಂತ್ರ್ಯ ಬಂದು ಆರು ದಶಕಗಳು ಪೂರ್ಣಗೊಂಡಿದ್ದರೂ ಬಡತನ ಇಷ್ಟೊಂದು ಅಗಾಧ ಪ್ರಮಾಣದಲ್ಲಿರುವುದು ಆತಂಕದ ಸಂಗತಿಯಾಗಿದೆ.

ಬಡತನದ ಪರಿಕಲ್ಪನೆ ಮತ್ತು ಬಡತನ ರೇಖೆ


ಬಡತನ ಎಂಬ ಪರಿಕಲ್ಪನೆಯನ್ನು ವ್ಯಾಖ್ಯಾನಿಸುವುದು ಅಷ್ಟು ಸುಲಭದ ಕೆಲಸವಲ್ಲ. ಬಡತನ ರೇಖೆ ಎಂಬುದು ಜೀವನದ ಅತ್ಯಾವಶ್ಯಕ ವಸ್ತುಗಳನ್ನು ಪಡೆಯಲಾಗದ ಒಂದು ಹತಾಶೆಯ ಪರಿಸ್ತಿತಿಯಾಗಿದೆ. ಬಡತನ ಒಂದು ಸಾಪೇಕ್ಷ ವಿಷಯವಾಗಿದ್ದು ಅದನ್ನು ಭೌತಿಕ ಅಂಶದ ಆಧಾರಗಳ ಮೇಲೆ ವ್ಯಕ್ತಪಡಿಸಲಾಗುತ್ತದೆ. ವಿಶ್ವ ಆಹಾರ ಮತ್ತು ಕೃಷಿ ಸಂಘಟನೆಯ ಮೊದಲ ಮಹಾ ನಿರ್ದೇಶಕ ಲಾರ್ಡ ಭಾಯ್ಡಾರ್ ಅವರು 1945ರಲ್ಲಿ ಮೊದಲ ಬಾರಿಗೆ ಬಡತನದ ರೇಖೆಯನ್ನು ವ್ಯಾಖ್ಯಾನಿಸಿದರು. ಅವರ ಪ್ರಕಾರ “ಒಬ್ಬ ವ್ಯಕ್ತಿ ಒಂದು ದಿನಕ್ಕೆ 2,300 ಕ್ಕಿಂತಲೂ ಕಡಿಮೆ ಆಹಾರದ ಕ್ಯಾಲೋರಿಯನ್ನು ಸೇವಿಸುತ್ತಿದ್ದರೆ, ಆತ ಬಡತನ ರೇಖೆಗಿಂತಲೂ ಕೆಳಗಿದ್ದಾನೆಂದು ಪರಿಗಣಿಸಬೇಕಾಗುತ್ತದೆ”.

ಭಾರತದ ಯೋಜನಾ ಆಯೋಗವು ಬಡತನ ರೇಖೆಯನ್ನು ಪೌಷ್ಟಿಕಾಂಶಗಳ ಅವಶ್ಯಕತೆಯ ಆಧಾರದ ಮೇಲೆ ವ್ಯಾಖ್ಯಾನಿಸಿತು. ಯೋಜನಾ ಆಯೋಗದ ಪ್ರಕಾರ “ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ 2400 ಕ್ಯಾಲೋರಿ ಆಹಾರ ಮತ್ತು ಪಟ್ಟಣ ಪ್ರದೇಶಗಳಲ್ಲಿ 2100 ಕ್ಯಾಲೋರಿ ಆಹಾರಕ್ಕಿಂತಲೂ ಕಡಿಮೆ ಆಹಾರ ಅನುಭೋಗಿಸುತ್ತಿರುವವರು ಬಡತನ ರೇಖೆಗಿಂತಲೂ ಕೆಳಗಿರುವವರು”.

ಪ್ರೊ. ಗಾಡ್ಗಿಳ್ ಡಾ.ವಿ.ಕೆ.ಆರ್.ವಿ.ರಾವ್, ಡಾ.ಪಿ.ಎನ್. ಲೋಕನಾಥನ್, ಡಾ. ಗಂಗೂಲಿ ಮತ್ತು ಅಶೋಕ್ ಮೆಹ್ತಾ ಅವರನ್ನೊಳಗೊಂಡ ಕಾರ್ಯಕಾರಿ ಸಮಿತಿಯು ವರ್ಷಕ್ಕೆ ಖಾಸಗಿ ಅನುಭೋಗಕ್ಕೆ ರೂ. 240ಕ್ಕಿಂತಲೂ ಕಡಿಮೆ ಹಣ ಖರ್ಚು ಮಾಡುವವರು ಬಡಜನರು ಎಂದು ವ್ಯಾಖ್ಯಾನಿಸಿತು. ಈ ಅಂದಾಜಿನ ಪ್ರಕಾರ ದಿನವೊಂದಕ್ಕೆ 67 ಪೈಸೆಗಿಂತಲೂ ಕಡಿಮೆ ಅನುಭೋಗ ವೆಚ್ಚ ಮಾಡುವವರು ಬಡಜನರು. ನಾಲ್ಕನೇ ಪಂಚವಾರ್ಷಿಕ ಯೋಜನೆಯು ತಿಂಗಳ ಅನುಭೋಗದ ವೆಚ್ಚದ ಮಿತಿಯನ್ನು ರೂ. 20ಕ್ಕೆ (1960-61ರ ಬೆಲೆಯಲ್ಲಿ) 5ನೇ ಪಂಚವಾರ್ಷಿಕ ಯೋಜನೆ ರೂ. 40.6 ಕ್ಕೂ (1972-73ರ ಬೆಲೆಯಲ್ಲಿ) 6ನೆ ಪಂಚವಾರ್ಷಿಕ ಯೋಜನೆ ರೂ. 51.3 ಗ್ರಾಮೀಣ ಪ್ರದೇಶಕ್ಕೂ ಮತ್ತು ರೂ. 59.7 ನಗರ ಪ್ರದೇಶಗಳಿಗೂ (1979-80ರ ಬೆಲೆಯಲ್ಲಿ) ಹೆಚ್ಚಿಸಿದವು. ಒಟ್ಟಿನಲ್ಲಿ ಹೇಳುವುದಾದರೆ ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದ ಜನರು ಬಡಜನರಾಗುತ್ತಾರೆ.ಕನಿಷ್ಠ ಪೌಷ್ಟಿಕಾಂಶಗಳನ್ನು ಪಡೆಯಲು ಬೇಕಾದ ಆಹಾರವನ್ನು ಸೇವಿಸಲು ಸಾಧ್ಯವಾಗದ ಜನರು ಬಡತನದ ರೇಖೆಗಿಂತ ಕೆಳಗಿರುವವರಾಗಿರುತ್ತಾರೆ

ಬಡತನದ ಪ್ರಮಾಣ


ಭಾರತದಲ್ಲಿನ ಬಡತನದ ಪ್ರಮಾಣವನ್ನು ತಿಳಿಯಲು ಹಲವಾರು ಅರ್ಥಶಾಸ್ತ್ರರು ಅನೇಕ ಸಮೀಕ್ಷೆಗಳನ್ನು ನಡೆಸಿದ್ದಾರೆ. ಅವರಲ್ಲಿ ಪ್ರಮುಖರಾದವರೆಂದರೆ ದಾಂಡೇಕರ್ ಮತ್ತು ರಾಥ್, ಮಿನ್ಹಾಸ್, ಬರ್ದಾನ್, ಅಹ್ಲುವಾಲಿಯಾ ಮುಂತಾದವರುಗಳು ಪ್ರಮುಖರಾಗಿದ್ದಾರೆ.

ದಾಂಡೇಕರ್ ಮತ್ತು ರಾಥ್ ಸಮೀಕ್ಷೆ


ದಾಂಡೇಕರ್ ಮತ್ತು ನೀಲಕಂಠ ರಾಥ್ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ರೂ. 180 ಮತ್ತು ನಗರ ಪ್ರದೇಶಗಳಲ್ಲಿ ವಾರ್ಷಿಕ ರೂ. 270 ಕ್ಕಿಂತಲೂ ಕಡಿಮೆ ವೆಚ್ಚ ಮಾಡುವವರು ಬಡತನ ರೇಖೆಗಿಂತಲೂ ಕೆಳಗಿರುವವರು. ಅವರ ಪ್ರಕಾರ, 1960-61 ರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ. 40ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ. 50ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದರು.

ಬರ್ದಾನ್ ಸಮೀಕ್ಷೆ


ಪಿ.ಕೆ.ಬದಾರ್ನ್ರವರು 1960-61ರ ಬೆಲೆಯ ಪ್ರಕಾರ, ತಿಂಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ರೂ. 15 ಮತ್ತು ನಗರ ಪ್ರದೇಶಗಳಲ್ಲಿ ರೂ. 18ಕ್ಕಿಂತಲೂ ಕಡಿಮೆ ಹಣವನ್ನು ಅನುಭೋಗದ ಮೇಲೆ ವೆಚ್ಚ ಮಾಡುವವರು ಬಡಜನರು ಎಂದು ತಿಳಿಸಿದರು. ಬರ್ದಾನ್ ಸಮೀಕ್ಷೆಯ ಪ್ರಕಾರ 1968-69ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೇ. 55 ಹಾಗೂ ನಗರ ಪ್ರದೇಶದಲ್ಲಿ ಶೇ. 41ರಷ್ಟು ಜನರು ಬಡತನ ರೇಖೆಗಿಂತಲೂ ಕೆಳಗಿದ್ದರು.

ಅಹ್ಲುವಾಲಿಯಾ ಸಮೀಕ್ಷೆ


ಅಹ್ಲುವಾಲಿಯಾವರು 1956-57 ರಿಂದ 1973-74ರ ಅವಧಿಗೆ ಗ್ರಾಮೀಣ ಬಡತನವನ್ನು ಅಂದಾಜು ಮಾಡಿದರು. ಅವರ ಪ್ರಕಾರ 1960-61 ರ ಬೆಲೆಯಲ್ಲಿ ಮಾಸಿಕ ರೂ.15ನ್ನು ಕನಿಷ್ಠ ಅನುಭೋಗದ ವೆಚ್ಚವೆಂದು ಪರಿಗಣಿಸಿದರೆ, 1956-57ರಲ್ಲಿ ಶೇ. 54.1, 1960-61ರಲ್ಲಿ ಶೇ. 38.9ರಷ್ಟು, 1966-67ರಲ್ಲಿ 56.5 ರಷ್ಟು ಮತ್ತು 1973-74ರಲ್ಲಿ ಶೇ. 46.1 ರಷ್ಟು ಗ್ರಾಮೀಣ ಜನರು ಬಡತನ ರೇಖೆಗಿಂತ ಕೆಳಗಿದ್ದರು.

ಯೋಜನಾ ಆಯೋಗದ ಅಂದಾಜು


ಯೋಜನಾ ಆಯೋಗವು ಪ್ರೊ.ಸುರೇಶ ಡಿ.ತೆಂಡೂಲ್ಕರ್ ಅಧ್ಯಕ್ಷತೆಯಲ್ಲಿ ನೇಮಿಸಿದ ಪರಿಣಿತರ ಗುಂಪು (2005) ಸಲ್ಲಿಸಿದ ವರದಿಯಲ್ಲಿರಾಶ್ಶ್ಟ್ರೀಯ ಬಡತನ ರೇಖೆಯನ್ನು 2004-05ರ ಬೆಲೆಗಳಲ್ಲಿ ಗ್ರಾಮೀಣ ಭಾಗಕ್ಕೆ ರೂ 446 .68 ತಿಂಗಳ ತಲಾ ಅನುಭೋಗ ವೆಚ್ಚ ಮತ್ತು ನಗರ ಭಾಗಕ್ಕೆ ರೂ.578 .80 ತಿಂಗಳ ತಲಾ ಅನುಭೋಗ ವೆಚ್ಚ ಎಂದು ವ್ಯಾಖ್ಯಾನಿಸಿತು.ಈ ಪರಿಣಿತರ ಗುಂಪಿನ ವರದಿಯ ಮೇರೆಗೆ 2004 - 05 ರಲ್ಲಿ ಗ್ರಾಮೀಣ ಭಾಗದಲ್ಲಿ ಶೇಕಡಾ 41 .8 ಮತ್ತು ನಗರ ಭಾಗದಲ್ಲಿ ಶೇಕಡಾ 25 .7 ಜನರು ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದ್ದರು.

ಯೋಜನಾ ಆಯೋಗದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿರುವ ಸಂಖ್ಯೆ 2011-12ರಲ್ಲಿ ಶೇಕಡಾ 21.9 ಆಗಿದೆ.ಗ್ರಾಮೀಣ ಭಾಗದಲ್ಲಿ ಶೇಕಡಾ 25.7 ಮತ್ತು ನಗರ ಭಾಗದಲ್ಲಿ ಶೇಕಡಾ 13.7ರಷ್ಟು ಜನರು ಬೇಡತನ ರೇಖೆಗಿಂತ ಕೆಳಗಿದ್ದರು .

* ನ್ಯಾಷನಲ್ ಸರ್ವೇ ಸ್ಯಾಂಪಲ್(NSS) ಭಾರತದಲ್ಲಿ ಬಡತನದ ಪ್ರಮಾಣವನ್ನು ತಯಾರಿಸುತ್ತದೆ.

ಬಡತನಕ್ಕೆ ಕಾರಣಗಳು


೧.ಮಿತಿ ಮೀರಿದ ಜನಸಂಖ್ಯೆ: ಭಾರತದಲ್ಲಿ ಜನಸಂಖ್ಯೆ ಬೆಳೆಯುತ್ತಿರುವ ದರವು ಆರ್ಥಿಕಾಭಿವೃದ್ದಿಯ ದರಕ್ಕಿಂತಲೂ ಅಧಿಕವಾಗಿದೆ.ಇದರಿಂದಾಗಿ ಜೀವನ ಮಟ್ಟದಲ್ಲಿ ಸುಧಾರಣೆಯಾಗುತ್ತಿಲ್ಲ.1951-61ರ ದಶಕದಲ್ಲಿ ಶೇಕಡಾ 24.80ರಷ್ಟು, 1971-81ರ ದಶಕದಲ್ಲಿ ಶೇಕಡಾ 25ರಷ್ಟು,1981-91ರ ದಶಕದಲ್ಲಿ ಶೇಕಡಾ 23.50ರಷ್ಟು, 1991-2001ರ ದಶಕದಲ್ಲಿ ಶೇಕಡಾ 21.34 ರ ದರದಲ್ಲಿ ಜನಸಂಖ್ಯೆ ಏರಿದೆ.
೨.ಹಿಂದುಳಿದಿರುವಿಕೆ:ಭಾರತದಲ್ಲಿ ಆರ್ಥಿಕ ವ್ಯವಸ್ಥೆಯ ಹಿಂದುಳಿದಿರುವಿಕೆ ಮತ್ತು ಅಪೂರ್ಣ ಅಭಿವೃದ್ಧಿಯು ಭಾರತದ ಬಡತನಕ್ಕೆ ಪ್ರಮುಖ ಕಾರಣವಾಗಿದೆ.
೩.ಆದಾಯ ಅಸಮಾನತೆ:ಭಾರತದಲ್ಲಿ ಆದಾಯ ಮತ್ತು ಸಂಪತ್ತು ಸಮಾನವಾಗಿ ಹಂಚಲ್ಪಟ್ಟಿಲ್ಲ.ಅದು ಕೆಲವೇ ಕೆಲವು ಜನರ ಬಳಿ ಕೇಂದ್ರೀಕೃತವಾಗಿದೆ.
೪.ನಿರುದ್ಯೋಗ:ನಿರುದ್ಯೋಗದ ಪ್ರಮಾಣ ಹೆಚ್ಚಿದೆಂತೆಲ್ಲ ಬಡತನ ಹೆಚ್ಚುತ್ತದೆ. ಪ್ರತಿ ಯೋಜನಾವಧಿ ಕಾಲದಲ್ಲೂ ನಿರುದ್ಯೋಗ ಹೆಚ್ಚುತ್ತಲೇ ಇದೆ.
೫.ಪ್ರಾದೇಶಿಕ ಅಸಮತೋಲನ: ಭಾರತದಲ್ಲಿ ಪ್ರಾದೇಶಿಕ ಅಸಮತೋಲನ ಸಹಿತ ಬಡತನಕ್ಕೆ ಕಾರಣವಾಗುತ್ತಿದೆ.ಪಂಜಾಬ್,ಹರಿಯಾಣ ಮುಂತಾದ ರಾಜ್ಯಗಳು ಹೆಚ್ಚು ಪ್ರಗತಿ ಸಾಧಿಸಿದರೆ ಬಿಹಾರ್,ಒರಿಸ್ಸಾ,ರಾಜಸ್ತಾನ ಇನ್ನೂ ಹಿಂದುಳಿದಿವೆ.
೬.ಹಣದುಬ್ಬರ:ನಿರಂತರವಾಗಿ ಏರುತ್ತಿರುವ ಬೆಲೆಗಳು ಬಡತನವನ್ನು ಹೆಚ್ಚಿಸುತ್ತವೆ. ಏಕೆಂದರೆ ಹಣದುಬ್ಬರದಿಂದಾಗಿ ಕೆಳವರ್ಗದ ಜನರ ಕೊಂಡುಕೊಳ್ಳುವ ಶಕ್ತಿ ಕುಗ್ಗುತ್ತದೆ