ಕರ್ನಾಟಕದ ವ್ಯವಸಾಯ (Karnataka : Agriculture)

 

• ಭೂಮಿಯನ್ನು ಉಳುಮೆಮಾಡಿ ಬೆಳೆ ಬೆಳೆಯುವುದನ್ನು ವ್ಯವಸಾಯ ಎನ್ನುವರು. ಅಲ್ಲದೆ ಪಶುಪಾಲನೆ, ಕೋಳಿ ಸಾಕಣೆ, ಜೇನು ಸಾಕಣೆ, ಮೀನುಗಾರಿಕೆ ಹಾಗೂ ರೇಷ್ಮೆ ಕೃಷಿಯೂ ವ್ಯವಸಾಯಕ್ಕೆ ಸೇರಿದೆ.
• ಕರ್ನಾಟಕದ ಶೇ.61.4 ಭಾಗದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವುದರಿಂದ ಅವರು ವ್ಯವಸಾಯವನ್ನೇ ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ.
• ಇದು ಮುಖ್ಯ ಜೀವನಾಧಾರಿತ ವೃತ್ತಿ. ನಮ್ಮ ರಾಜ್ಯದ ಆರ್ಥಿಕತೆಯ ಬೆನ್ನೆಲುಬು.
• ಜನರಿಗೆ ಆಹಾರ, ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ. ರಾಜ್ಯದ ಆದಾಯದ ಮೂಲವಾಗಿದೆ. ವಿದೇಶಿ ವಿನಿಮಯ ಗಳಿಸಿಕೊಡುತ್ತದೆ.
• ಕಾಫಿ, ರೇಷ್ಮೆ, ಸಾಂಬಾರ ಪದಾರ್ಥಗಳು, ತಂಬಾಕು, ಹತ್ತಿ ಮುಂತಾದುವು ರಫ್ತಾಗುವ ಕೃಷಿ ಉತ್ಪನ್ನಗಳು.
• ತೃತೀಯ ವೃತ್ತಿಗಳಾದ ಸಾರಿಗೆ, ಬ್ಯಾಂಕಿಂಗ್ ವ್ಯವಸ್ಥೆ, ವಿಮೆ ಇತ್ಯಾದಿಗಳ ಪ್ರಗತಿಗೂ ಇದು ಪೂರಕವಾಗುತ್ತದೆ.

ವ್ಯವಸಾಯದ ವಿಧಗಳು


• ಕರ್ನಾಟಕ ರಾಜ್ಯದಲ್ಲಿ ಭೂ ಹಿಡುವಳಿಯ ಜೊತೆಗೆ, ಫಲವತ್ತತೆ, ನೀರಿನ ಲಭ್ಯತೆ, ಮಳೆಯ ಪ್ರಮಾಣ, ವಾಯುಗುಣ, ಭೂಸ್ವರೂಪ, ಮಾರುಕಟ್ಟೆ ಇವುಗಳಿಗನುಗುಣವಾಗಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಇವುಗಳ ಆಧಾರದ ಮೇಲೆ ವ್ಯವಸಾಯದ ವಿಧಗಳನ್ನು ವಿಂಗಡಿಸಲಾಗಿದೆ.
• ಜೀವನಾಧಾರ ಬೇಸಾಯ, ನೀರಾವರಿ ಬೇಸಾಯ, ಒಣ ಬೇಸಾಯ, ಮಿಶ್ರ ಬೇಸಾಯ, ಸ್ಥಳಾಂತರ ಬೇಸಾಯ, ವಾಣಿಜ್ಯ ಬೇಸಾಯ, ನೆಡುತೋಪು ಬೇಸಾಯ ಇತ್ಯಾದಿ.
• ಕಾಲುವೆ, ಕೆರೆ, ಬಾವಿ ಮೂಲಗಳಿಂದ ನೀರನ್ನು ಬಳಕೆ ಮಾಡಿ ಸಾಗುವಳಿ ಮಾಡುವ ಕೃಷಿ ಪದ್ಧತಿಗೆ ‘ನೀರಾವರಿ ಬೇಸಾಯ’ ವೆನ್ನುವರು. ಭತ್ತ, ಕಬ್ಬು ನೀರಾವರಿ ಬೇಸಾಯದ ಪ್ರಮುಖ ಬೆಳೆಗಳು.
• ಮಳೆ ಆಶ್ರಿತ ಬೆಳೆಗಳ ಸಾಗುವಳಿಗೆ ಒಣ ಅಥವಾ ಶುಷ್ಕ ಬೇಸಾಯ ಎನ್ನುವರು.
• ವಿಶಾಲವಾದ ಸಾಗುವಳಿ ಭೂಮಿಯಲ್ಲಿ ಹಣ ಗಳಿಕೆಗಾಗಿ ಕೆಲವೇ ಬಹುವಾರ್ಷಿಕ ಬೆಳೆಗಳನ್ನು ಸಾಗುವಳಿಮಾಡುವುದೇ ‘ನೆಡುತೋಪು ಬೇಸಾಯ’ (ಪ್ಲಾಂಟೇಷನ್). ಉದಾ: ಕಾಫಿ, ಚಹ, ರಬ್ಬರ್, ಕೋಕೋ ಇತ್ಯಾದಿ.
• ಸ್ವದೇಶೀ ಉಪಯೋಗಕ್ಕಲ್ಲದೆ ವಿದೇಶೀ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಮಾಡುವ ಬೆಳೆಗಳ ಸಾಗುವಳಿಯೇ ‘ವಾಣಿಜ್ಯ ಬೇಸಾಯ’. ಉದಾ: ತಂಬಾಕು, ಹತ್ತಿ, ಸೆಣಬು ಇತ್ಯಾದಿ. ಮಾರಾಟಕ್ಕಲ್ಲದೆ,
• ರೈತರ ಜೀವನೋಪಾಯಕ್ಕಾಗಿ ಬೆಳೆ ಬೆಳೆಯುವ ಕೃಷಿ ಪದ್ಧತಿಗೆ ‘ಜೀವನಾಧಾರ ಬೇಸಾಯ’ ಎನ್ನುವರು. ಇದು ಪುರಾತನ ಮಾದರಿ ಬೇಸಾಯ.
• ಇತ್ತೀಚಿನ ದಿನಗಳಲ್ಲಿ ಮಿಶ್ರ ಬೇಸಾಯ ಹೆಚ್ಚು ಪ್ರಚಲಿತಗೊಳ್ಳುತ್ತಿದೆ. ಬೆಳೆ ಬೆಳೆಯುವುದರ ಜೊತೆಯಲ್ಲೇ ಪಶು ಸಂಗೋಪನೆ, ರೇಷ್ಮೆ ಕೃಷಿ, ಕುರಿಸಾಕಣೆ, ಕೋಳಿಸಾಕಣೆ, ಜೇನುಸಾಕಣೆ, ಮೀನುಗಾರಿಕೆ ಮುಂತಾದ ಉಪ ಕಸುಬುಗಳನ್ನು ನಿರ್ವಹಿಸುವುದನ್ನು ಮಿಶ್ರ ಬೇಸಾಯ ಎನ್ನುತ್ತಾರೆ.

ಕರ್ನಾಟಕದ ಪ್ರಮುಖ ಬೆಳೆಗಳು


1. ಭತ್ತ


• ಇದು ಕರ್ನಾಟಕದ ಅತ್ಯಂತ ಪ್ರಮುಖ ಆಹಾರದ ಬೆಳೆ.
• ರಾಜ್ಯದ ಜನರು ಅಕ್ಕಿಯನ್ನು ಮುಖ್ಯ ಆಹಾರವಾಗಿ ಬಳಸುವರು. ಒಟ್ಟು ಸಾಗುವಳಿ ಪ್ರದೇಶದಲ್ಲಿ ಶೇ. 28.2 ಭಾಗದಲ್ಲಿ ಭತ್ತ ಬೆಳೆಯಲಾಗುತ್ತದೆ.
• ನೀರಾವರಿ, ರಾಸಾಯನಿಕ ಗೊಬ್ಬರ ಹಾಗೂ ಅಧಿಕ ಇಳುವರಿ ನೀಡುವ ತಳಿಗಳ ಬಳಕೆಯಿಂದ ಭತ್ತದ ಇಳುವರಿಯಲ್ಲಿ ಇತ್ತೀಚೆಗೆ ಸುಧಾರಣೆಯಾಗಿದೆ.
• ಭತ್ತವು ಉಷ್ಣವಲಯದ ಬೆಳೆ. ಇದರ ಬೇಸಾಯಕ್ಕೆ ಹೆಚ್ಚು ಮಳೆ ಮತ್ತು ಉಷ್ನಾಂಶವಿರಬೇಕು.
• ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ನೀರಾವರಿ ಸೌಲಭ್ಯ ಅಗತ್ಯ.
• ಫಲವತ್ತಾದ ಜೇಡಿಮಿಶ್ರಿತ ಮಣ್ಣು ಹಾಗೂ ಮೆಕ್ಕಲು ಮಣ್ಣು ಈ ಬೆಳೆಗೆ ಬಹು ಸೂಕ್ತ.
• ಹಸಿರೆಲೆ ಗೊಬ್ಬರ, ಸೊಪ್ಪು, ಅಧಿಕ ಸಂಖ್ಯೆಯ ಕಾರ್ಮಿಕರೂ ಸಹ ಭತ್ತದ ಬೇಸಾಯಕ್ಕೆ ಅಗತ್ಯ. ಸುಮಾರು ಶೇ.70 ಭಾಗದಷ್ಟು ಫಸಲನ್ನು ಜೂನ್-ಆಗಸ್ಟ್ ತಿಂಗಳುಗಳಲ್ಲಿ ನಾಟಿ ಮಾಡಿ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಕಟಾವು ಮಾಡಲಾಗುವುದು.
• ಬೇಸಿಗೆಯಲ್ಲೂ ನೀರಾವರಿ ಸೌಲಭ್ಯ ದೊರೆಯುವ ಪ್ರದೇಶಗಳಲ್ಲಿ ಭತ್ತ ಬೆಳೆಯುವರು.
• ಭತ್ತವನ್ನು ಮಲೆನಾಡಿನಲ್ಲಿ ಚೆಲ್ಲುವ ವಿಧಾನ ಮತ್ತು ಮೈದಾನಗಳಲ್ಲಿ ನಾಟಿ ಮಾಡುವ ವಿಧಾನಗಳಿಂದ ಬೆಳೆಯಲಾಗುವುದು.
• ಭತ್ತ ಬೆಳೆಯುವ ಪ್ರದೇಶಗಳು : ಭತ್ತವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಬೆಳೆಯಲಾಗುತ್ತದೆ. ಕೃಷ್ಣ -ತುಂಗಭದ್ರಾ ಕಣಿವೆ, ಕಾವೇರಿ ನದಿಕಣಿವೆ ಹಾಗೂ ಕರಾವಳಿ ಜಿಲ್ಲೆಗಳು ಭತ್ತದ ಉತ್ಪಾದನೆಗೆ ಹೆಸರಾಗಿವೆ.
• ರಾಯಚೂರು ಜಿಲ್ಲೆ ಭತ್ತದ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಅನಂತರ ದಾವಣಗೆರೆ, ಮೈಸೂರು, ಶಿವಮೊಗ್ಗ, ಮಂಡ್ಯ, ಕೊಪ್ಪಳ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಕಲಬುರಗಿ ಜಿಲ್ಲೆಗಳು ಪ್ರಮುಖವಾದವು.

2. ಜೋಳ


• ಭತ್ತದ ನಂತರ ಜೋಳವು ಕರ್ನಾಟಕದ ಎರಡನೆಯ ಸ್ಥಾನದ ಬೆಳೆಯಾಗಿದೆ.
• ಒಟ್ಟು ಸಾಗುವಳಿ ಭೂಮಿಯಲ್ಲಿ ಶೇ. 26 ಭಾಗವು ಜೋಳದ ಬೆಳೆಗೆ ಬಳಕೆಯಾಗುತ್ತಿದೆ.
• ಭಾರತದಲ್ಲೇ ಕರ್ನಾಟಕವು ಜೋಳದ ಉತ್ಪಾದನೆಯಲ್ಲಿ ಎರಡನೆಯ ಸ್ಥಾನದಲ್ಲಿದೆ. ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ.
• ಜೋಳವು ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರ ಧಾನ್ಯವಾಗಿದೆ.
• ಇದೂ ಸಹ ಹುಲ್ಲು ಜಾತಿಗೆ ಸೇರಿದ ಸಸ್ಯವರ್ಗ. ಇದನ್ನು ವೈಜ್ಞಾನಿಕವಾಗಿ‘ಸೊರ್ಗಾಮ್ ವಲ್ಗರೆ’ ಎಂದು ಕರೆಯುವರು.
• ಇದು ಉಷ್ಣವಲಯದ ಬೆಳೆಯಾಗಿದ್ದು, ಬೇಸಾಯಕ್ಕೆ ಸಾಧಾರಣ ಮಳೆ, ಒಣ ಹವೆ, ಕಪ್ಪು, ಕೆಂಪು ಮತ್ತು ಮೆಕ್ಕಲು ಮಿಶ್ರಿತ ಮಣ್ಣು ಇದ್ದರೆ ಸಾಕು. ಇದನ್ನು ಬಿತ್ತನೆ ಮಾಡುವ ವಿಧಾನದಿಂದ ಮಳೆ ಆಶ್ರಯದಲ್ಲಿ ಬೆಳೆಯಲಾಗುತ್ತದೆ.
• ಬೆಳೆಯುವ ಪ್ರದೇಶಗಳು : ವಿಜಯಪುರ, ಕಲಬುರಗಿ, ಬಾಗಲಕೋಟೆ, ರಾಯಚೂರು, ಬೆಳಗಾವಿ, ಬೀದರ್, ಬಳ್ಳಾರಿ, ದಾವಣಗೆರೆ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಜೋಳದ ಬೇಸಾಯ ಹೆಚ್ಚಾಗಿರುತ್ತದೆ.
• ವಿಜಯಪುರ ಜಿಲ್ಲೆಯು ಜೋಳದ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

3. ರಾಗಿ


• ಇದರ ವೈಜ್ಞಾನಿಕ ಹೆಸರು ‘ಯೆಲಿಯುಸಿನ್ ಕೋರಾಕಾನ.
• ಕರ್ನಾಟಕದಲ್ಲಿ ಭತ್ತ ಮತ್ತು ಜೋಳಗಳ ನಂತರ ರಾಗಿಯು ಮೂರನೆಯ ಮುಖ್ಯ ಆಹಾರ ಧಾನ್ಯವಾಗಿದೆ. ಸುಲಭ ಬೆಲೆಗೆ ದೊರೆಯುವುದು.
• ಇದು ಉಷ್ಣವಲಯದ ಬೆಳೆ. ಅಧಿಕ ಉಷ್ನಾಂಶ, ಸಾಧಾರಣ ಮಳೆ, ಕೆಂಪು ಮಣ್ಣು, ಮೆಕ್ಕಲು ಮಿಶ್ರಿತ ಮಣ್ಣು ಯೋಗ್ಯವಾಗಿರುತ್ತದೆ. ಇದು ಬರ ನಿಭಾಯಿಸಬಹುದಾದ ಗುಣವನ್ನು ಹೊಂದಿದೆ.
• ಇದು ಪ್ರಮುಖ ಮುಂಗಾರು ಬೆಳೆ.
• ಬೆಳೆಯುವ ಪ್ರದೇಶಗಳು: ರಾಗಿಯ ಉತ್ಪಾದನೆಯಲ್ಲಿ ಭಾರತದಲ್ಲೇ ಕರ್ನಾಟಕವು ಮೊದಲ ಸ್ಥಾನದಲ್ಲಿದೆ.
• ರಾಗಿಯ ಬಳಕೆಯು ಇತ್ತೀಚೆಗೆ ಕಡಿಮೆಯಾಗುತ್ತಾ ಬರುತ್ತಿದೆ.
• ಕರ್ನಾಟಕದಲ್ಲಿ ತುಮಕೂರು ಅತಿ ಹೆಚ್ಚು ರಾಗಿ ಬೆಳೆಯುವ ಮತ್ತು ಉತ್ಪಾದಿಸುವ ಜಿಲ್ಲೆ. ಅನಂತರದ ಸ್ಥಾನಗಳಲ್ಲಿ ರಾಮನಗರ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ ಮತ್ತು ದಾವಣಗೆರೆ ಜಿಲ್ಲೆಗಳು ರಾಗಿ ಬೆಳೆಗೆ ಪ್ರಸಿದ್ಧವಾಗಿವೆ.

ವಾಣಿಜ್ಯ ಬೆಳೆಗಳು


1. ಕಬ್ಬು


• ಇದು ಕರ್ನಾಟಕದ ಪ್ರಮುಖ ವಾಣಿಜ್ಯ ಹಾಗೂ ಕೈಗಾರಿಕಾ ಬೆಳೆಯಾಗಿದೆ.
• ಕರ್ನಾಟಕವು ಕಬ್ಬು ಉತ್ಪಾದನೆಯಲ್ಲಿ ಭಾರತದಲ್ಲಿ ನಾಲ್ಕನೆಯ ಸ್ಥಾನದಲ್ಲಿರುವ ರಾಜ್ಯವಾಗಿದೆ.
• ಇದು ಉಷ್ಣವಲಯದ ಬೆಳೆ.
• ಅಧಿಕ ಉಷ್ನಾಂಶ ಮತ್ತು ಅಧಿಕ ಮಳೆಯಾಗುವ ಅಥವಾ ನೀರಾವರಿ ಪೂರೈಕೆಯಿರುವ ಭಾಗಗಳಲ್ಲಿ ಬೆಳೆಯಲಾಗುತ್ತದೆ.
• ಕಬ್ಬಿನ ಬೇಸಾಯಕ್ಕೆ ಮರಳು ಮಿಶ್ರಿತ ಮೆಕ್ಕಲು ಮಣ್ಣು, ಕೆಂಪು ಮಣ್ಣು ಉತ್ತಮವಾಗಿರುತ್ತದೆ.
• ಇದೂ ಸಹ ಹುಲ್ಲು ಜಾತಿಗೆ ಸೇರಿದ ಸಸ್ಯ. ಇದು ಸುಮಾರು ಮೂರು ಮೀಟರ್ ಎತ್ತರದವರೆಗೆ ಬೆಳೆಯುತ್ತದೆ.
• ಇದರ ವೈಜ್ಞಾನಿಕ ಹೆಸರು ‘ಸಖ್ಯಾರಮ್ ಅಫಿಸಿನೇರಮ್’. ಇದರಲ್ಲಿ ಸಕ್ಕರೆಯ ಅಂಶವಿದ್ದು, ಬೆಲ್ಲ, ಸಕ್ಕರೆ ತಯಾರಿಸಲು ಬಳಸಲಾಗುವುದು.
• ಇದು ಬಹುವಾರ್ಷಿಕ ಬೆಳೆಯಾಗಿರುವುದರಿಂದ ನೀರಾವರಿ ಸೌಲಭ್ಯ ಅಗತ್ಯ.
• ಬೆಳೆಯುವ ಪ್ರದೇಶಗಳು : ಬೆಳಗಾವಿಯು ರಾಜ್ಯದಲ್ಲಿಯೇ ಅತೀ ಹೆಚ್ಚು ಕಬ್ಬು ಉತ್ಪಾದಿಸುವ ಜಿಲ್ಲೆಯಾಗಿದೆ. ಆಲಮಟ್ಟಿ ಯೋಜನೆಯಿಂದ ನೀರಾವರಿ ಸೌಲಭ್ಯ ಪಡೆದಿರುವ ಬಾಗಲಕೋಟೆಯು ಎರಡನೇ ಸ್ಥಾನ ಪಡೆದಿದೆ. ಮಂಡ್ಯ, ಮೈಸೂರು, ವಿಜಯಪುರ, ಬೀದರ್, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ಹಾಸನ, ಕೊಪ್ಪಳ, ಹಾವೇರಿ ಕಬ್ಬು ಬೆಳೆಯುವ ಇತರ ಜಿಲ್ಲೆಗಳು. ಸ್ವಾತಂತ್ರ್ಯ ಪೂರ್ವದಿಂದಲೂ ಕಬ್ಬು ಬೆಳೆಯುವಲ್ಲಿ ಮಂಡ್ಯಜಿಲ್ಲೆಯು ಹೆಸರುವಾಸಿಯಾಗಿದೆ.

2. ಹತ್ತಿ


• ಹತ್ತಿಯು ನಾರಿನ ಬೆಳೆ.
• ಇದು ಉಷ್ಣವಲಯ ಮತ್ತು ಉಪ ಉಷ್ಣವಲಯಗಳ ವಾಣಿಜ್ಯ ಬೆಳೆ.
• ಸಾಧಾರಣ ಮಳೆ, ಹೆಚ್ಚು ಉಷ್ನಾಂಶ ಹಾಗೂ ಕಪ್ಪು ಮಣ್ಣು ಹತ್ತಿ ಬೆಳೆಗೆ ಸೂಕ್ತ.
• ಹತ್ತಿಯನ್ನು ಕರ್ನಾಟಕದಲ್ಲಿ ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳಲ್ಲಿ ಬಿತ್ತನೆ ಮಾಡಲಾಗುತ್ತದೆ. ಇದನ್ನು ಮಳೆ ಆಶ್ರಯದಲ್ಲಿ ಬೆಳೆಯುವುದೇ ಹೆಚ್ಚು. ನೀರಾವರಿ ಸಹಾಯದಿಂದಲೂ ಹತ್ತಿ ಬೆಳೆಯಲಾಗುವುದು.
• ಬೆಳೆಯುವ ಪ್ರದೇಶಗಳು : ರಾಜ್ಯದಲ್ಲಿ ಹತ್ತಿ ಉತ್ಪಾದಿಸುವ ಪ್ರಮುಖ ಜಿಲ್ಲೆಗಳೆಂದರೆ: ಹಾವೇರಿ, ಧಾರವಾಡ, ಗದಗ, ಮೈಸೂರು, ಬಳ್ಳಾರಿ, ರಾಯಚೂರು, ಕಲಬುರಗಿ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ ಮತ್ತು ವಿಜಯಪುರ. ಹಾವೇರಿ ಜಿಲ್ಲೆ ಹತ್ತಿ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಧಾರವಾಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ.

3. ತಂಬಾಕು (ಹೊಗೆಸೊಪ್ಪು)


• ಇದು ನಿಕೋಷಿಯಾನ ವರ್ಗಕ್ಕೆ ಸೇರಿದ ಸಸ್ಯವಾಗಿದೆ. ಇದರಲ್ಲಿ‘ನಿಕೋಟಿನ್’ ಎಂಬ ಮಾದಕ ವಸ್ತುವಿದೆ.
• ತಂಬಾಕನ್ನು ಧೂಮಪಾನ, ಅಂದರೆ ಬೀಡಿ, ಸಿಗರೇಟು, ಸಿಗಾರ್ ಇತ್ಯಾದಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
• ಪೋರ್ಚುಗೀಸರು 17ನೇ ಶತಮಾನದಲ್ಲಿ ತಂಬಾಕನ್ನು ಭಾರತಕ್ಕೆ ಪರಿಚಯಿಸಿದರು. ಅನಂತರ ಕರ್ನಾಟಕದಲ್ಲಿ ಬೆಳೆಯಲು ಪ್ರಾರಂಭವಾಯಿತು.
• ಈಗ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ.
• ಇದನ್ನು ಸಾಧಾರಣ ಮಳೆ ಮತ್ತು ಹೆಚ್ಚು ಉಷ್ನಾಂಶವುಳ್ಳ ಮರಳು ಮಿಶ್ರಿತ ಮಣ್ಣಿನ ಪ್ರದೇಶಗಳಲ್ಲಿ ಬೆಳೆಯಬಹುದು.
• ಕರ್ನಾಟಕದಲ್ಲಿ ವರ್ಜೀನಿಯಾ, ಬೀಡಿ ತಂಬಾಕು ಮತ್ತು ಜಗಿಯಲು ಬಳಸುವಂತಹ ತಂಬಾಕನ್ನು ಬೆಳೆಯಲಾಗುತ್ತದೆ.
• ವರ್ಜೀನಿಯಾ ತಂಬಾಕು ಉತ್ತಮ ದರ್ಜೆಯದ್ದಾಗಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆ ಗಳಿಸಿದೆ.
• ಬೆಳೆಯುವ ಪ್ರದೇಶಗಳು : ಕರ್ನಾಟಕವು ಭಾರತದ ಪ್ರಮುಖ ತಂಬಾಕು ಉತ್ಪಾದಿಸುವ ರಾಜ್ಯಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮೈಸೂರು ಜಿಲ್ಲೆಯು ತಂಬಾಕು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾಸನ, ಶಿವಮೊಗ್ಗ, ಕೊಡಗು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ದಾವಣಗೆರೆ, ತುಮಕೂರು, ಗದಗ ಜಿಲ್ಲೆಗಳಲ್ಲಿಯೂ ತಂಬಾಕಿನ ಬೇಸಾಯ ಹಂಚಿಕೆಯಾಗಿದೆ.
• ಬೆಳಗಾವಿ ಜಿಲ್ಲೆಯ ‘ನಿಪ್ಪಾಣಿ’ ಯು ದೇಶದಲ್ಲಿ ಬೀಡಿ ತಯಾರಿಕಾ ತಂಬಾಕು ಮಾರುಕಟ್ಟೆಗೆ ಅತ್ಯಂತ ಪ್ರಸಿದ್ಧವಾದುದು.

4. ಕಾಫಿ


• ಕಾಫಿಯು ಕರ್ನಾಟಕದ ಪ್ರಸಿದ್ಧ ನೆಡುತೋಟದ ಹಾಗೂ ಪಾನೀಯ ಬೆಳೆ.
• ಕರ್ನಾಟಕವು ಭಾರತದಲ್ಲೇ ಕಾಫಿಯ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
• ಕರ್ನಾಟಕವು ಅರೇಬಿಕ ಹಾಗೂ ರೊಬುಸ್ಟ ಎಂಬ ಎರಡು ಪ್ರಭೇದದ ಕಾಫಿಯನ್ನು ಉತ್ಪಾದಿಸುತ್ತಿದೆ. ಇದರಲ್ಲಿ ಅರೇಬಿಕ ಶ್ರೇಷ್ಠ ದರ್ಜೆಯದಾಗಿದ್ದು ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದಿದೆ.
• ಕಾಫಿಯು ಉಷ್ಣವಲಯದ ಅಧಿಕ ಮಳೆ ಪಡೆಯುವ ಬೆಟ್ಟಗಳ ಇಳಿಜಾರುಗಳಲ್ಲಿ ಬೆಳೆಯುವ ಬೆಳೆ.
• ಜೇಡಿಮಿಶ್ರಿತ ಮಣ್ಣು ಈ ಬೆಳೆಗೆ ಸೂಕ್ತ. ಕಾಫಿ ಗಿಡಕ್ಕೆ ಸೂರ್ಯನ ನೇರ ಕಿರಣಗಳು ಬೀಳದಂತೆ ನೆರಳಿನ ಮರಗಳನ್ನು ಬೆಳೆಸಬೇಕು. ಮಳೆಯ ನೀರು ಹರಿದು ಹೋಗುವಂತಿರಬೇಕು. ಈ ಎಲ್ಲಾ ಅಂಶಗಳಿರುವ ಕರ್ನಾಟಕದ ಮಲೆನಾಡಿನಲ್ಲಿ ಕಾಫಿ ಬೆಳೆಯಲಾಗುತ್ತದೆ.
• ಬೆಳೆಯುವ ಪ್ರದೇಶಗಳು : ದೇಶದ ಕಾಫಿಯ ಉತ್ಪಾದನೆಯಲ್ಲಿ ಶೇ. 70 ಭಾಗವನ್ನು ಕರ್ನಾಟಕವೇ ಉತ್ಪಾದಿಸುತ್ತಿದೆ. ಕೊಡಗು ಜಿಲ್ಲೆಯು ಕಾಫಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಚಿಕ್ಕಮಗಳೂರು, ಹಾಸನ ಪ್ರಮುಖವಾದವು. ಶಿವಮೊಗ್ಗ, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸ್ವಲ್ಪ ಕಾಫಿ ಬೇಸಾಯವಿದೆ.